ಬರಡು ಭೂಮಿಯಲ್ಲಿ ಸಮೃದ್ಧ ಬೆಳೆ

26arsph1ep
Published on

ಅರಸೀಕೆರೆ: ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಹೇಗೆಲ್ಲ ಕೈಗೊಳ್ಳಬಹುದು ಎಂಬುದನ್ನು ಕೃಷಿಕ ಹಾಗೂ ಕಣಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರವಿ ಸಾಬೀತುಪಡಿಸಿದ್ದಾರೆ.

ಇದಕ್ಕೆ ಪೂರಕ ಎನ್ನುವಂತೆ ಕಲ್ಲು, ಮಣ್ಣಿನ ಐದು ಎಕರೆ ಜಮೀನಿನಲ್ಲಿ ದಾಳಿಂಬೆ, ಅಡಕೆ, ಸಿಲ್ವರ್, ವಿವಿಧ ಜಾತಿಯ ಹಲಸು, ನಿಂಬೆ ಸೇರಿ ಬಗೆ ಬಗೆಯ ಬೆಳೆಗಳನ್ನು ಬೆಳೆಯಲಾಗಿದೆ. ಅವರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದು, ನಿರೀಕ್ಷೆಗೆ ಮೀರಿದ ಫಸಲಿನ ಜತೆಗೆ ಆದಾಯವೂ ಕೈಹಿಡಿಯುತ್ತಿದೆ. ಅಲ್ಲದೆ ಗುತ್ತಿಗೆ ಪಡೆದಿರುವ 20 ಎಕರೆ ಭೂಮಿಯಲ್ಲಿಯೂ ಸಾವಯವ ಕೃಷಿ ನಿರಂತರವಾಗಿ ನಡೆಯುತ್ತಿದೆ. ಸತತ ಪರಿಶ್ರಮದಿಂದ ಹದಗೊಳಿಸಿ ಕಡಿಮೆ ಖರ್ಚಿನಲ್ಲಿ ಹೇಗೆಲ್ಲ ಲಾಭ ಗಳಿಸಬಹುದು ಎಂಬುದು ಸುತ್ತಮುತ್ತಲಿನ ನೂರಾರು ರೈತರಿಗೆ ಮನವರಿಕೆಯಾಗಿದೆ. ವ್ಯವಸಾಯದತ್ತ ಬೆನ್ನು ತೋರಿದವರಿಗೆ ಅವರ ಸಾಧನೆ ಹುಬ್ಬೇರುವಂತೆ ಮಾಡಿದ್ದು ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವುದು ಮತ್ತೊಂದು ವಿಶೇಷ.

ಬೇಸಾಯದ ಜತೆಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದು, ವಿವಿಧ ತಳಿಯ 12 ರಾಸುಗಳನ್ನು ಸಾಕುತ್ತಿದ್ದಾರೆ. ಪ್ರತಿನಿತ್ಯ 60ರಿಂದ 70 ಲೀ. ರಾಸಾಯನಿಕಮುಕ್ತ ಹಾಲನ್ನು ಖಾಸಗಿ ಡೇರಿಗಳಿಗೆ ನೀಡಿ ಆದಾಯ ಹೆಚ್ಚಳಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ರಸಗೊಬ್ಬರ ಬಳಕೆ ಮಾಡದೆ ಜೋಳ, ರಾಗಿ ಬೆಳೆದಿದ್ದು, ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪ್ರತಿವರ್ಷ 25ರಿಂದ 30 ಲಾರಿ ಲೋಡ್ ದನದ ಗೊಬ್ಬರ ದೊರೆಯುತ್ತಿದ್ದು, ತೋಟವನ್ನು ಸಂಪೂರ್ಣ ರಾಸಾಯನಿಕಮುಕ್ತವಾಗಿ ಮಾಡಿರುವುದು ಶ್ರಮದ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದಂತಾಗಿರುವುದು ಸಾಮಾನ್ಯ ಸಂಗತಿಯಲ್ಲ.

ಐದು ಎಕರೆಯಲ್ಲಿ ಮಕ್ಕೆಜೋಳ, ಹಲಸಂದೆ, ಅವರೆಕಾಯಿ, ಹುರುಳಿ ಸೇರಿ ಹಲವು ಬಗೆಯ ಧಾನ್ಯಗಳ ಬಿತ್ತನೆ ಕಾರ್ಯವನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಮಳೆಯಾಶ್ರಿತ 15 ಎಕರೆ ಭೂಮಿಯಲ್ಲಿ ರಾಗಿ ಬಿತ್ತನೆಗೆ ಒತ್ತು ನೀಡಿದ್ದು, ಫಸಲಿನ ಜತೆಗೆ ಜಾನುವಾರು ಮೇವಿನ ಕೊರತೆ ನೀಗಿಸಲು ಉಪಾಯ ಕಂಡುಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಪ್ರತಿವರ್ಷ ತಲಾ 10 ಸಾವಿರ ತೆಂಗಿನಕಾಯಿ ಹಾಗೂ ಎಳನೀರು ಮಾರಾಟ ಮಾಡುವ ಮೂಲಕ ನಿರೀಕ್ಷೆಗೂ ಮೀರಿದ ಲಾಭ ಪಡೆದಿದ್ದಾರೆ. ಬರಡು ಭೂಮಿಯಲ್ಲಿ 1 ಸಾವಿರ ದಾಳಿಂಬೆ ಸಸಿ ನಾಟಿ ಮಾಡಿದ್ದು, ತೋಟಗಾರಿಕೆ ಬೆಳೆಗೂ ಜೈ ಎಂದಿರುವುದು ಕೆ.ಆರ್.ರವಿ ಅವರಿಗೆ ಕೃಷಿಯಲ್ಲಿ ಇರುವ ಆಸಕ್ತಿಯನ್ನು ಅನಾವರಣಗೊಳಿಸಿದೆ ಎಂದರೆ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net