

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಪ್ರಸಿದ್ಧ ಶ್ರೀ ಬರಗೇರಮ್ಮ ದೇವಿ ಸನ್ನಿಧಾನದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮದ ಅಂಗವಾಗಿ ಆವರಣದಲ್ಲಿ ಭಾನುವಾರ ನಡೆದ ಚಂಡಿಕಾ ಹೋಮ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಪ್ರತಿ ವರ್ಷದಂತೆ ಈ ಬಾರಿಯೂ ಹೋಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಾಸದಲ್ಲಿ ದೇವಿಯ ಭಕ್ತರು ಹೋಮ, ಹವನ ಆಯೋಜಿಸುತ್ತಿದ್ದು, ಶಾಸ್ತ್ರೋಕ್ತವಾಗಿ ನೆರವೇರಿತು.
ಹೋಮ ಬೆಳಗ್ಗೆ 8ರಿಂದ ಆರಂಭವಾಗಿ ಮಧ್ಯಾಹ್ನ 3ಕ್ಕೆ ಪೂರ್ಣಾಹುತಿಯೊಂದಿಗೆ ಮುಕ್ತಾಯವಾಯಿತು. ನವಧಾನ್ಯ, ವಸ್ತ್ರ ಸೇರಿ ಪೂಜಾ ಸಾಮಗ್ರಿ ಸಮರ್ಪಿಸಲಾಯಿತು. ನೆರೆದಿದ್ದ ಸದ್ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.
ಮೊದಲು ಮಹಾಗಣಪತಿ ಸ್ಮರಣೆಯೊಂದಿಗೆ ಹೋಮಕ್ಕೆ ಚಾಲನೆ ದೊರೆಯಿತು. ಪೂಜೆ ಆರಂಭವಾದ ನಂತರ ಚಾಮುಂಡೇಶ್ವರಿ ದೇವಿ ಸೇರಿ ಇತರೆ ದೇವರ ಸ್ತೋತ್ರ ಪಠಿಸುತ್ತ ಹೋಮದ ನೇತೃತ್ವ ವಹಿಸಿದ್ದ ಪುರೋಹಿತರು ಪೂರ್ಣಾಹುತಿ ನಡೆಸಿಕೊಟ್ಟರು.
ಶ್ರಾವಣ ಮಾಸದ ಅಂಗವಾಗಿ ರಾಜಮಾತೆ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕುಂಚಿಗನಾಳ್ ಕಣಿವೆ ಮಾರಮ್ಮ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.