

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಮೂರನೇ ದಿನ ಮಂಗಳವಾರ ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಯಾದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ 25 ಸಾವಿರಕ್ಕೂ ಅಧಿಕ ಶೇಂಗಾ ಬೀಜ, ಅವರೆಕಾಳುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷಾಲಂಕಾರ ಸೇವೆ ಜರುಗಿತು.
ಮುಂಬರುವ ದಿನಗಳಲ್ಲಿ ನಾಡಿನಾದ್ಯಂತ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು. ಮಹಿಳಾ ಭಜನಾ ಮಂಡಳಿಯಿಂದ ದುರ್ಗೆಯ ಅಷ್ಟೋತ್ತರ ಶತನಾಮಾವಳಿ, ಲಲಿತಾ ಸಹಸ್ರನಾಮ, ಪಾರಾಯಣ ನಡೆಯಿತು. ದೇಗುಲಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರು ಇಷ್ಟಾರ್ಥ ಈಡೇರಿಕೆಗಾಗಿ, ಕುಟುಂಬದ ಒಳಿತಿಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು.