ಬರಗಿಯಲ್ಲಿ ಕಸಕಲಪುರ ಪಾರ್ವತಾಂಬೆ ಜಾತ್ರೆ

03-GPT-3
ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಶ್ರೀ ಕಸಕಲಪುರ ಪಾರ್ವತಾಂಬೆ ಜಾತ್ರೆ ನಡೆಯಿತು.
Published on

ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಕಸಕಲಪುರ ಪಾರ್ವತಾಂಬೆ ಜಾತ್ರೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿರುವ ಮೂಲ ದೇವಸ್ಥಾನಕ್ಕೆ ಸೋಮವಾರ ತೆರಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ್ದ ಗ್ರಾಮಸ್ಥರು, ಮಂಗಳವಾರ ಗ್ರಾಮಕ್ಕೆ ದೇವರ ಪೆಟ್ಟಿಗೆಯನ್ನು ತಂದು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವರ ಬಿಜ್ಜು ಮಾಡಿ ಹೂವಿನ ಪಲ್ಲಕ್ಕಿಯೊಳಗೆ ಕುದುರೆ ವಾಹನದ ಮೇಲೆ ಅಮ್ಮನವರ ಉತ್ಸವ ಮೂರ್ತಿಯನ್ನಿರಿಸಿ ಮಂಗಳವಾದ್ಯ, ಸತ್ತಿಗೆ ಸುರಪಾಣಿ, ಬಿರುದು ಬಾವಲಿಗಳೊಂದಿಗೆ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಹರಕೆ ಹೊತ್ತವರು ಚಿನ್ನದ ತಾಳಿ, ಸರ, ಓಲೆ, ಮೂಗುತಿಗಳನ್ನು ದೇವತೆಗೆ ನೀಡಿ ಹರಕೆ ತೀರಿಸಿದರು. ಜಾತ್ರೆಗೆ ಆಗಮಿಸಿದ್ದ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net