

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಮಳೆ-ಬೆಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಬರಗಾಲ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದ ಬಳಿಕ ಕೇಂದ್ರ ತಂಡ ಆಗಮಿಸಿ ವೀಕ್ಷಿಸಲಿದೆ. ತಂಡ ನೀಡುವ ವರದಿ ಮೇಲೆ ಪರಿಹಾರ ಸಿಗಲಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣವಾಗಿ ಪರಿಹಾರ ನೀಡುವುದರೊಳಗೆ ರೈತನ ಜೀವವೇ ಹೋಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಇಂತಹ ಕಷ್ಟದ ಸ್ಥಿತಿ ಎದುರಾದಾಗ ನೆರವು ನೀಡುವ ನಿಟ್ಟಿನಲ್ಲಿ ಶಾಶ್ವತ ಠೇವಣಿ ಇಡುವ ಕೆಲಸ ಸರ್ಕಾರದಿಂದ ಆಗಬೇಕು. ಇದರಿಂದ ತ್ವರಿತವಾಗಿ ಪರಿಹಾರ ಸಿಗಲು ಸಾಧ್ಯ. ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಧಾವಿಸುವ ಕೆಲಸ ಮಾಡಬೇಕಿದ್ದು, ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಿಸಬೇಕು. ಇದರ ಜತೆಗೆ ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಳೆ ಇಲ್ಲದೆ ರೈತ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಂಕಷ್ಟ ಅರಿಯದ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ತೊಡಗಿವೆ. ಹೀಗಾಗಿ ಸಾಲ ಮನ್ನಾ ಮಾಡಬೇಕು. ಅದಕ್ಕೂ ಮುನ್ನ ಬರಪೀಡಿತ ಪ್ರದೇಶದ ರೈತರಿಂದ ಮಾಡುತ್ತಿರುವ ಸಾಲ ವಸೂಲಾತಿಗೆ ತಡೆ ನೀಡಬೇಕು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಲು ರೈತರ ನಿಯೋಗವು ಆ. 25ರಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದೆ. ಈ ನಿಯೋಗದಲ್ಲಿ ಸಂಘದ ಪದಾಕಾರಿಗಳು ಸೇರಿ ರಾಷ್ಟ್ರಮಟ್ಟದ ರೈತ ಮುಖಂಡರು ಪಾಲ್ಗೊಳ್ಳಲಿದ್ದು, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದರ ಜತೆಗೆ ರೈತ ಜೀವನ ಸುಧಾರಣೆಗೆ ಬೇಕಿರುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದರು.