

ಹಾಸನ: ರಾಜ್ಯದಲ್ಲಿ ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಐಷಾರಾಮಿ ಜೀವನ ನಡೆಸುವ ಮೂಲಕ ಮೋಜು-ಮಾಸ್ತಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ಜನರನ್ನು ಕಿತ್ತು ತಿನ್ನುತ್ತಿದೆ. ನಾಲ್ಕು ತಿಂಗಳಿನಿಂದ ರೈತರ ಖಾತೆಗೆ ಒಂದು ರೂಪಾಯಿ ಹಣ ಹಾಕಿಲ್ಲ. ಇವರು ಪ್ರಧಾನಿಯನ್ನು ನೋಡಲು ಹೋಗುವಾಗ ಐಷಾರಾಮಿ ವಿಮಾನದಲ್ಲಿ ಹೋಗಿದ್ದಾರೆ. ಅಲ್ಲದೆ ಸಿನಿಮಾದವರ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಜನರ ತೆರಿಗೆ ಸಂಗ್ರಹದ ಹಣದಲ್ಲಿ ಮೋಜು- ಮಸ್ತಿ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯನಿಂದ ಹಿಡಿದು ಸಚಿವ ಜಮೀರ್ ಅಹ್ಮದ್ ಸೇರಿದಂತೆ ಎಲ್ಲರಿಗೂ ಛೀಮಾರಿ ಹಾಕಬೇಕು. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ಕೂಡ ಐಷಾರಾಮಿ ಕಾರು, ವಿಮಾನ ಇವರಿಗೆ ಬೇಕಾಗಿದೆ. ಕೋಟಿ ರೂಪಾಯಿ ವಾಚು, ಒಂದು ಲಕ್ಷದ ಶೂ ಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದೇ ರೀತಿ ಮುಂದುವರೆದರೆ ಜನರು ನೀವು ಹೋದ ಕಡೆಯಲ್ಲಿ ನಿಮ್ಮ ಬಟ್ಟೆಯನ್ನು ಹರಿಯುತ್ತಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಮಂತ್ರಿಗಳನ್ನು ರೈತರು, ದಲಿತರು, ಬಡವರು ಸೇರಿ ಹರಿದು ಹಾಕುತ್ತಾರೆ ಎಚ್ಚರದಿಂದ ಇರಿ ಎಂದು ಹೇಳಿದರು.ಕಾಂಗ್ರೆಸ್‌ನವರು ಓಟ್ ಬ್ಯಾಂಕಿಗಾಗಿ ಹಿಜಾಬ್, ಟಿಪ್ಪು ಸುಲ್ತಾನ್ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಕೈ ಹಾಕುತ್ತಾರೆ. ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ, ಸರ್ಕಾರ ಜನರಿಗೆ ದ್ರೋಹ, ವಂಚನೆ ಮಾಡುತಿದೆ. ಇದರ ವಿರುದ್ಧ ಬಿಜೆಪಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು. ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು ಶಾಲಾ ಮಕ್ಕಳಲ್ಲಿ ಮತ್ತೆ ವಿಷ ಬೀಜ ಬಿತ್ತಲು ಹೊರಟಿದ್ದಾರೆ. ಈಗಾಗಲೇ ಈ ಪ್ರಕರಣ ಕೋರ್ಟ್‌ನಲ್ಲಿದ್ದರೂ ಕೂಡ ಅದನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮತ್ತೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ದುರಂಕಾರದ ನಡೆಯನ್ನು ಸಿದ್ದರಾಮಯ್ಯ ಬಿಡಬೇಕು ಎಂದರು.