

ಚಾಮರಾಜನಗರ: ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿ ಬೆಳೆ ಹಾನಿ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರವನ್ನು ಬರಪೀಡಿತ ಜಿಲ್ಲೆಯೆಂದು ೋಷಣೆ ಮಾಡಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಸೆ.18ರಂದು ನಡೆದ ಕುಡಿಯುವ ನೀರು ಹಾಗೂ ವಿಪತ್ತು ನಿರ್ವಹಣೆ ಕುರಿತು ಸಭೆ ನಡೆದಿತ್ತು. ಈ ಸಭೆಯ ನಿರ್ಣಾಯದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಅ.3ರಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಶೇ.34ರಷ್ಟು ಮಳೆ ಕೊರತೆ: ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್‌ನಲ್ಲಿ 58.4 ಮಿ.ಮೀ ವಾಡಿಕೆ ಮಳೆ ಇದ್ದು, ಆದರೆ ವಾಸ್ತವದಲ್ಲಿ 31.8 ಮಿ.ಮೀ ಮಳೆಯಾಗಿತ್ತು. ಜುಲೈನಲ್ಲಿ ವಾಡಿಕೆ ಮಳೆ-64 ಮಿ.ಮೀ, ವಾಸ್ತವ ಮಳೆ-52 ಮಿ.ಮೀ, ಆಗಸ್ಟ್‌ನಲ್ಲಿ ವಾಡಿಕೆ ಮಳೆ-72 ಮಿ.ಮೀ, ವಾಡಿಕೆ ಮಳೆ-70 ಮಿ.ಮೀ, ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ-127 ಮಿ.ಮೀ, ವಾಸ್ತವ ಮಳೆ-57 ಮಿ.ಮೀ ಮಳೆಯಾಗಿದೆ. ಒಟ್ಟಾರೆಯಾಗಿ ಮುಂಗಾರು ಹಂಗಾಮಿನಲ್ಲಿ 320 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ವಾಸ್ತವದಲ್ಲಿ 211 ಮಿ.ಮೀ ಮಳೆಯಾಗಿ ಶೇ.34ರಷ್ಟು ಮಳೆ ಕೊರತೆಯಾಗಿದೆ. ತಾಲೂಕುವಾರು ಶೇಕಡವಾರು ಮಳೆ ಕೊರತೆ ನೋಡುವುದಾದರೆ, ಚಾಮರಾಜನಗರ-ಶೇ.35, ಕೊಳ್ಳೇಗಾಲ-38, ಯಳಂದೂರು-ಶೇ.43, ಹನೂರು-ಶೇ.45, ಗುಂಡ್ಲುಪೇಟೆ-ಶೇ.2ರಷ್ಟು ಮಳೆ ಕೊರತೆಯಾಗಿದೆ.
ಕುಡಿಯಲು ನೀರಿಲ್ಲ:
ಮುಂಗಾರು ಹಂಗಾಮಿನ ಮಳೆ ಕೊರತೆ ಉಂಟಾದ ಪರಿಣಾಮ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಚಾಮರಾಜನಗರ ಮತ್ತು ಹನೂರು ತಾಲೂಕುಗಳಲ್ಲಿ ಸತತ ನಾಲ್ಕು ವಾರಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ವಾಡಿಕೆ ಮಳೆಯಾದ ಪರಿಣಾಮ ಅಂತರ್ಜಲ ಮಟ್ಟ ಕುಸಿಯಿತು. ಹನೂರು ತಾಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 10 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಯಿತು. ಚಾಮರಾಜನಗರ ತಾಲೂಕಿನ 57 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಬರುವ ದಿನಗಳಲ್ಲಿ ಹನೂರು ತಾಲೂಕಿನ 35, ಯಳಂದೂರು ತಾಲೂಕಿನ 6, ಕೊಳ್ಳೇಗಾಲ ತಾಲೂಕಿನ 3ಸೇರಿ ಒಟ್ಟು 80 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚಾಮರಾಜನಗರ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಸ್ಥಿತಿ ಇದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಜಲಮೂಲದ ಸ್ಥಿತಿಗತಿ ವಿವರಣೆ:
ಬರ ೋಷಣೆಗಾಗಿ ಜಿಲ್ಲೆಯ ಜಲಮೂಲದ ಪರಿಸ್ಥಿತಿಯನ್ನು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಒಟ್ಟು 65 ಕೆರೆಗಳಿದ್ದು, ಇವುಗಳಲ್ಲಿ ಮಳೆ ಅಭಾವದಿಂದ 17 ಕೆರೆಗಳು ಖಾಲಿ ಇದ್ದು, 14 ಕೆರೆಗಳಲ್ಲಿ ಶೇ.0-30ರಷ್ಟು ನೀರು ಶೇಖರಣೆಯಾಗಿದೆ. 14 ಕೆರೆಗಳಲ್ಲಿ ಶೇ.31- 50ರಷ್ಟು, 15 ಕೆರೆಗಳಲ್ಲಿ ಕಡಿಮೆ ಪ್ರಮಾಣದ ನೀರು ಶೇಖರಣೆಗೊಂಡಿರುವುದು ರೈತರ ಬೆಳೆಗಳಿಗೆ ನೀರು ಒದಗಿಸಲು ಕಷ್ಟಕರವಾಗಿ, ಅಂತರ್ಜಲ ಮಟ್ಟವೂ ಕುಸಿದಿದೆ. ಸುವರ್ಣಾವತಿ, ಚಿಕ್ಕಹೊಳೆ, ನಲ್ಲೂರು ಅಮಾನಿಕೆರೆ, ಉಡುತೊರೆಹಳ್ಳ ಜಲಾಶಯಗಳಲ್ಲಿ ನೀರಿನ ಒಳಹರಿವು ಇಲ್ಲದೆ ಸಂಗ್ರಹಣೆಯೂ ಕಡಿಮೆಯಾಗಿತ್ತು ಎನ್ನುವುದನ್ನು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಜಾನುವಾರುಗಳಿಗೆ ಮೇವಿನ ಕೊರತೆ:
ಮಳೆ ಕೊರತೆಯಿಂದಾಗಿ ಹನೂರು ತಾಲೂಕಿನ ಕೌದಳ್ಳಿ, ಕುರಟ್ಟಿಹೊಸೂರು, ದಂಟಹಳ್ಳಿ, ಹೊಸಹಳ್ಳಿ, ಭದ್ರಯ್ಯನಹಳ್ಳಿ, ಅರಬಗೆರೆ, ಎಲ್‌ಪಿಎಸ್ ಕ್ಯಾಂಪ್, ಒಡಕೆಹಳ್ಳ, ಯರಂಬಾಡಿ, ಕೊಪ್ಪ, ಗಾಜನೂರು ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು, ತೆಳ್ಳನೂರು, ಅರೆಪಾಳ್ಯ, ಜಾಗೇರಿ, ಚಾಮರಾಜನಗರ ತಾಲೂಕಿನ ಪುಣಜನೂರು, ದೊಡ್ಡಮೂಡಹಳ್ಳಿ, ಚಿಕ್ಕಮೂಡಹಳ್ಳಿ, ಮೂಕನಪಾಳ್ಯ, ಕುಳ್ಳೂರು, ಮುತ್ತಿಗೆ, ಸಂತೇಮರಹಳ್ಳಿ, ಕುದೇರು, ಬಾಗಳಿ, ಜನ್ನೂರು, ಹರವೆ, ಮುಕ್ಕಡಹಳ್ಳಿ, ಮಲಿಯೂರು, ಮೂಡ್ನಾಕೂಡು, ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿ, ಮಂಗಲ, ಗೋಪಾಲಪುರ, ಬರಗಿ, ಬೇಗೂರು, ಚಿಕ್ಕೆಲಚಟ್ಟಿ, ಹಕಲಾಪುರ, ಕಬ್ಬಳ್ಳಿ, ಹೊನ್ನಶೆಟ್ಟರಹುಂಡಿ, ಉತ್ತಂಗೆರೆಹುಂಡಿ, ತೆಂಕಲಹುಂಡಿ ಗ್ರಾಮಗಳಲ್ಲಿ ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗಿತ್ತು.
ವಿವಿಧ ಬೆಳೆಗಳು ಹಾನಿ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ಜ.1ರಿಂದ ಅ.3ವರೆಗೆ ತೇವಾಂಶದ ಕೊರತೆಯಿಂದ ಸುಮಾರು 14944 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ರಾಗಿ, ನೆಲಗಡಲೆ, ತೊಗರಿ ಮತ್ತು ಹುರುಳಿ ಬೆಳೆಗಳಲ್ಲಿ ಹಾನಿ ಕಂಡುಬಂದಿದೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಮುಸುಕಿನ ಜೋಳ, ಸೂರ್ಯಕಾಂತಿ, ನೆಲಗಡಲೆ, ಹತ್ತಿ, ಭತ್ತ, ರಾಗಿ ಬೆಳೆಗಳು ಪ್ರಮುಖವಾಗಿವೆ.
ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಬರ ೋಷಣೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೆ. ರಾಜ್ಯದಲ್ಲಿ ಬೇರೆ ಯಾವ ಯಾವ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆಯೋ ಆ ಎಲ್ಲ ಜಿಲ್ಲೆಗಳನ್ನೂ ಒಟ್ಟಿಗೆ ಸೇರಿಸಿ ೋಷಣೆ ಮಾಡಲಾಗುತ್ತದೆ. ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ, ಚಾಮರಾಜನಗರ