ಬರ ಪ್ರದೇಶ ಘೋಷಣೆಗೆ ವರದಿ ಸಿದ್ಧಪಡಿಸಿ

28-08-Shiva-4
ರಾಯಚೂರಿನ ಜಿ.ಪಂ. ಸಭಾಂಗಣದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಸೋಮವಾರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು. .ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್, ತಾ.ಪಂ. ಇಒ ಚಂದ್ರಶೇಖರ ಪವಾರ್, ಎಪಿಎಂಸಿ ಅಧ್ಯ್ಕಷ ಚಂದ್ರಶೇಖರಗೌಡ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜಸ್ವಾಮಿ ಆಲ್ಕೂರು, ಆರ್‌ಎಪಿಎಂಎಸ್ ಅಧ್ಯಕ್ಷ ಜಯವಂತರಾವ್ ಪತಂತೆ ಇದ್ದರು.
Published on

ರಾಯಚೂರು: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.66ರಷ್ಟು ಮಳೆ ಕೊರತೆಯಾಗಿದ್ದು, ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು. ಆದರೆ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ಅಕಾರಿಗಳು ತಾಲೂಕನ್ನು ಬರ ಪೀಡಿತ ಎಂದು ಘೋಷಣೆಗೆ ಬೇಕಾದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಟೆಲಿಮೀಟರ್ ಆಧಾರದಲ್ಲಿ ಎಲ್ಲ ಕಡೆ ಮಳೆಯಾಗಿದೆ ಎಂದು ಪರಿಗಣಿಸಲು ಆಗುವುದಿಲ್ಲ. ಕೂಡಲೇ ಸ್ಥಳ ಪರಿಶೀಲನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ 131 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಮಾನ್ವಿ, ಸಿರವಾರ, ಲಿಂಗಸುಗೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ರಾಯಚೂರು ತಾಲೂಕನ್ನು ಬರ ಪೀಡಿತ ಎಂದು ಪರಿಗಣಿಸುವ ನಿಟ್ಟಿನಲ್ಲಿ ಅಕಾರಿಗಳು ಸಮರ್ಪಕ ವರದಿ ನೀಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ದೀಪಾ ಕುಲಕರ್ಣಿ ಮಾತನಾಡಿ, ಸರ್ಕಾರ ಮಳೆ ಪ್ರಮಾಣ ದಾಖಲು ಆಧಾರದ ಮೇಲೆ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗಿದ್ದು, ಕೃಷಿ ಇಲಾಯೆಯಿಂದ ಸರ್ವೇ ನಡೆಸಲಾಗಿಲ್ಲ ಎಂದು ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿ ಮಂಜುನಾಥ ಮಾತನಾಡಿ, ತಾಲೂಕಿನ 19 ಗ್ರಾ.ಪಂ. ವ್ಯಾಪ್ತಿಯಲ್ಲಿ 38 ಕಡೆ ಮರಳು ಬ್ಲಾಕ್ ಗುರುತಿಸಿದ್ದು, ನದಿ ಪಾತ್ರದಲ್ಲಿ ಕಾಡ್ಲೂರು ಬಿಟ್ಟರೆ ಎಲ್ಲಿಯೂ ಬ್ಲಾಕ್‌ಗಳಿಲ್ಲ. ನಿಗದಿಗಿಂತ ಹೆಚ್ಚಿನ ಮರಳು ಸಾಗಿಸುತ್ತಿದ್ದ ಟಿಪ್ಪರ್ ಮಾಲೀಕರ ವಿರುದ್ಧ ದೂದು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಅಮಾಯಕ ರೈತರು, ಬಡವರ ಮೇಲೆ ಅಕ್ರಮ ಮರಳು ಸಾಗಣೆ ಹೆಸರಿನಲ್ಲಿ ದೂರು ದಾಖಲಿಸುವ ಮುನ್ನ ಆಲೋಚಿಸಬೇಕು. ರಾಜೋಳ್ಳಿಯಲ್ಲಿ ರೈತನ ಬೀಳು ಬಿದ್ದ ಹೊಲದಲ್ಲಿ ಮರಳು ಪತ್ತೆಯಾಗಿದ್ದು, ಮರಳು ಅಕ್ರಮ ಎಂದೇಳಿ ಠಾಣೆಗೆ ರೈತರ ವಿರುದ್ಧ ದೂರು ನೀಡಿರುವುದು ಸರಿಯಲ್ಲ ತಿಳಿಸಿದರು.
ಬಿಇಒ ಚಂದ್ರಶೇಖರ ಭಂಡಾರಿ ತಾಲೂಕಿನಲ್ಲಿ 1,021 ಕಾಯಂ ಶಿಕ್ಷಕ ಹುದ್ದೆ ಖಾಲಿಯಿದ್ದು, ಈ ಪೈಕಿ 613 ಅತಿಥಿ ಶಿಕ್ಷಕರ ಭರ್ತಿಗೆ ಅನುಮೋದನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯಿಂದ ಇತರ ಜಿಲ್ಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ತೆರವಾದ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ನೀಡದ ಕಾರಣ ಸಮಸ್ಯೆಯಾಗದಂತೆ ವರ್ಗಾವಣೆಗೊಂಡ ಶಿಕ್ಷಕರನ್ನು ತರಾತುರಿಯಲ್ಲಿ ಬಿಡುಗಡೆ ಮಾಡದಂತೆ ಶಾಸಕ ಬಸನಗೌಡ ದದ್ದಲ್ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್, ತಾ.ಪಂ. ಇಒ ಚಂದ್ರಶೇಖರ ಪವಾರ್, ಎಪಿಎಂಸಿ ಅಧ್ಯ್ಕಷ ಚಂದ್ರಶೇಖರಗೌಡ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜಸ್ವಾಮಿ ಆಲ್ಕೂರು, ಆರ್‌ಎಪಿಎಂಎಸ್ ಅಧ್ಯಕ್ಷ ಜಯವಂತರಾವ್ ಪತಂಗೆ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net