ಬರ ಪೀಡಿತ ಜಿಲ್ಲೆ ಘೋಷಿಸಿ

5BK3
Published on

ಬಸವಕಲ್ಯಾಣ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಿನಿ ವಿಧಾನಸೌಧಕ್ಕೆ ತೆರಳಿ ಬೇಡಿಕೆ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿ ಅಧಿಕಾರಿ ಯಾದೇಶ ಅವರಿಗೆ ಸಲ್ಲಿಸಲಾಯಿತು.
ಒಂದು ದಶಕದಿಂದ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೀದರ್ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿ ಎಕರೆಗೆ ಕನಿಷ್ಠ ೨೫ ಸಾವಿರ ರೂ.ಪರಿಹಾರ ನೀಡಬೇಕು, ರೈತರ ಜಮೀನುಗಳಿಗೆ ಸಮಪರ್ಕ ವಿದ್ಯುತ್ ಸೌಕರ್ಯ ಕಲ್ಪಿಸಬೇಕು, ಕಾಡು ಪ್ರಾಣಿಗಳನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಸಂಘದ ತಾಲೂಕು ಅಧ್ಯಕ್ಷ ರುದ್ರಯ್ಯ ಸ್ವಾಮಿ, ಪ್ರಮುಖರಾದ ವೀರಾರೆಡ್ಡಿ ಪಾಟೀಲ್, ಸಂತೋಷಕುಮಾರ ಗುದಗೆ, ಇಕ್ರಾಮ್ ಖಾದಿವಾಲೆ, ಕಮಲಾಬಾಯಿ ಮಡ್ಡೆ, ಬಸವರಾಜ ಬಂಡೆ, ಮಹೇಶ ಬಂಡೆ, ಕಾಶಪ್ಪ ಬಿರಾದಾರ, ಅಂಬಾರಾಯ ಕರಹರಿ, ರಾಜಕುಮಾರ ಹೊಳ್ಳೆ, ಖಾನ್ ಸಾಬ್, ಸುನೀಲ್ ರಾಜೋಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net