ಶಹಾಪುರ: ತಾಲೂಕಿನ ಶಾರದಹಳ್ಳಿ ಗ್ರಾಮದ ರೈತರಿಗೆ ವಿತರಿಸಬೇಕಿದ್ದ ಬರ ಪರಿಹಾರದ ಹಣ ಬೇರೆಯವರ ಖಾತೆಗೆ ಜಮೆಯಾಗಿದ್ದು ಇದನ್ನೂ ಕೂಡಲೇ ಸರಿಪಡಿಸಬೇಕು ಎಂದು ಗ್ರಾಮದ ರೈತ ಹನುಮೇಶ ರಾಮರಾವ್ ತಹಸಿಲ್ದಾರ್‌ಗೆ ಮನವಿ ಮಾಡಿದ್ದಾರೆ.
ನನ್ನ ಹೆಸರಿನಲ್ಲಿರುವ ೨ ಎಕರೆ ೩೬ ಗುಂಟೆ (ಸರ್ವೇ ನಂ.೭೩/೪) ಹೊಲದಲ್ಲಿ ಹತ್ತಿ ಬೆಳೆದಿದ್ದು, ಇದಕ್ಕೆ ೨೦೦೦ ರೂ. ಬರ ಪರಿಹಾರ ಬಂದಿದ್ದು, ಇದು ನನ್ನ ಖಾತೆಗೆ (ಎಫ್‌ಐಡಿ ನಂ.೦೪೦೩೦೦೦೦೧೩೮೨೪) ಬರದೆ, ರಾಮಣ್ಣ ಎಂಬುವರರ ಖಾತೆಗೆ ೨೦೨೪ ಜ. ೨೨ರಂದು ಜಮೆಯಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ ಆಗಿರುವ ಪ್ರಮಾದದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ಗಮನಕ್ಕೆ ತಂದಾಗ ಕೂಡಲೇ ಸರಿಪಡಿಸಿ ಹಣ ನಿಮ್ಮ ಖಾತೆಗೆ ಜಮೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಅದೇ ರೀತಿ ಮತ್ತೆ ೨೦೨೪ ಮೇ ೬ರಂದು ೧೭೭೨೦ ರೂ. ಬರ ಪರಿಹಾರದ ಹಣ ನನ್ನ ಖಾತೆಗೆ ಜಮೆ ಆಗುವ ಬದಲಿಗೆ ಮುಕ್ಕಪ್ಪ ಎಂಬುವವರ ಖಾತೆಗೆ ಜಮೆಯಾಗಿದೆ. ಇಲ್ಲೂ ಕೂಡಾ ನನಗೆ ಅನ್ಯಾಯ ಮತ್ತು ಮೋಸ ಆಗಿದ್ದು, ಈ ಕುರಿತು ತಹಸಿಲ್ ಕಚೇರಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸಿದಾಗ ನಿಮ್ಮ ಹೆಸರಿನಲ್ಲಿ ಯಾವುದೇ ಹೊಲ ಇಲ್ಲ. ನಿಮಗೆ ಬರ ಪರಿಹಾರದ ಹಣ ಬರುವುದಿಲ್ಲ ಎಂಬ ಹಾರಿಕೆ ಉತ್ತರ ನೀಡುವ ಮೂಲಕ ಅನ್ಯಾಯ ಎಸಗಲಾಗಿದೆ ಎಂದರು. ಹೀಗಾಗಿ ನನಗೆ ಬರಬೇಕಾದ ಬರ ಪರಿಹಾರದ ಹಣವನ್ನು ಕೂಡಲೇ ಸಂಬಧಿಸಿದ ಅಧಿಕಾರಿಗಳು ಸರಿಪಡಿಸಿಕೊಡಬೇಕು. ಹಾಗೊಂದು ವೇಳೆ ತಪ್ಪಿದ್ದಲ್ಲಿ ಕಾನೂನಿನ ಪ್ರಕಾರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಕೃಷಿ ಸಚಿವರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದ್ದಾರೆ.