ಬರ ನಿರ್ಲಕ್ಷಿಸಿದ ಸಿದ್ದರಾಮಯ್ಯ ಸರ್ಕಾರ

V.H.Kageri
Published on

ಚಿತ್ರದುರ್ಗ: 220 ತಾಲೂಕು ಮಾತ್ರವಲ್ಲ, ಇಡೀ ರಾಜ್ಯ ಹಿಂದೆಂದೂ ಕಾಣದ ಭೀಕರ ಬರದಿಂದ ತತ್ತರಿಸಿದೆ. ಜನ, ಜಾನುವಾರುಗಳಿಗೆ ತೀವ್ರ ಸಮಸ್ಯೆ ತಲೆದೂರಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷೃ ತೋರಿದ್ದು, ಈವರೆಗೂ ನೆರವಿಗೆ ಧಾವಿಸಿಲ್ಲ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಎಂಬ ಗೊಂದಲ ಸಿಎಂರನ್ನು ಕಾಡುತ್ತಿದೆ. ಗದ್ದುಗೆಗಾಗಿ ಪರಸ್ಪರ ತಿಕ್ಕಾಟದಲ್ಲಿ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗ್ಯಾರಂಟಿಗಳಿಗೆ ಇರುವ ಹಣ, ಬರ ಪರಿಹಾರಕ್ಕೆ ಏಕೆ ಇಲ್ಲ. ಈಚೆಗೆ 102 ಕೋಟಿ ರೂ. ಒಂದೇ ಬಾರಿ ಐಟಿ ವಶಕ್ಕೆ ಪಡೆದಿದೆ. ಇಂಥ ಭ್ರಷ್ಟಾಚಾರ ಯಾವ ಅವಧಿಯಲ್ಲೂ ಆಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಸಮರ್ಪಕ ವಿದ್ಯುತ್ ಪೂರೈಸಿದೆ. ಆದರೆ, ಈಗಿನ ಸರ್ಕಾರದಲ್ಲಿ ಪದೇ ಪದೆ ವ್ಯತ್ಯಯ ಉಂಟಾದ ಪರಿಣಾಮ ಸಂತೇಬೆನ್ನೂರು ವ್ಯಾಪ್ತಿಯೊಂದರಲ್ಲೇ 163 ಜನಕ್ಕೆ ಹಾವು ಕಚ್ಚಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟಪಟ್ಟು ಹಣ ಖರ್ಚು ಮಾಡಿದರೂ ಬೆಳೆ ಕೈಸೇರದ ಸ್ಥಿತಿ ಇದೆ. ಮೊದಲು ತನ್ನ ಪರಿಹಾರದ ಪಾಲನ್ನು ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದರು.

ಇಡೀ ದೇಶದಲ್ಲಿ ಬಿಜೆಪಿ ಕೋಟ್ಯಂತರ ಅರ್ಹರಿಗೆ 5 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಆದರೆ, 10 ಕೆ.ಜಿ ಘೋಷಿಸಿದವರು ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದನ್ನು ನಂಬಿ ಮತ ಹಾಕಿದ ಜನಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಹಣ ಹಲವರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರದಿಂದ 13,458 ಕೋಟಿ ರೂ. ವಿತರಣೆ: ಯಾವ ರಾಜ್ಯಕ್ಕೂ ಮೋದಿ ಅವರು ಅನ್ಯಾಯ ಮಾಡಿಲ್ಲ. ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 2006ರಿಂದ 2014ರವರೆಗೂ ಬರ ಪರಿಹಾರವಾಗಿ 2,250 ಕೋಟಿ ರೂ. ನೀಡಲಾಗಿದೆ. ಆದರೆ, ಎನ್‌ಡಿಎ 2014ರಿಂದ 2022ರವರೆಗೂ ನಮ್ಮ ರಾಜ್ಯಕ್ಕೆ ಬರ ಮತ್ತು ನೆರೆ ಹಾವಳಿ ಪರಿಹಾರವಾಗಿ 13,458 ಕೋಟಿ ರೂ. ವಿತರಿಸಿದೆ. ಕೇಂದ್ರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದ ಅಂಕಿ-ಅಂಶ ಸಂಬಂಧಿಸಿದ ಇಲಾಖೆಯಲ್ಲೇ ಸಿಗಲಿದೆ. ಕಾಂಗ್ರೆಸ್ ನಾಯಕರದ್ದು, ಅರ್ಥವಿಲ್ಲದ ಆರೋಪ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಉಂಟಾಗಿರುವ ಬರದಿಂದ ಜನ, ಜಾನುವಾರುಗಳ ಸ್ಥಿತಿ-ಗತಿಯ ವಾಸ್ತವಾಂಶ ಅರಿಯಲು ಬಿಜೆಪಿಯ 15 ತಂಡದಿಂದ ಅಧ್ಯಯನ ನಡೆಯುತ್ತಿದೆ. ನಮ್ಮ ನಾಯಕರ ಪ್ರವಾಸದ ಪರಿಣಾಮ 7ಗಂಟೆ ವಿದ್ಯುತ್ ಪೂರೈಕೆಗೆ ಸಿಎಂ ಮುಂದಾಗಿದ್ದಾರೆ. ಪ್ರಬಲ ಪ್ರತಿ ಪಕ್ಷವಾಗಿ, ಜನರ ದನಿಯಾಗಿ ನಿಂತ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದರು.

ಅಧ್ಯಯನದ ನಂತರ ವರದಿ ಸಲ್ಲಿಸಿ, ಬೆಳೆ ಪರಿಹಾರಕ್ಕೆ ಒತ್ತಾಯಿಸಲಾಗುವುದು. ಸಾಲದ ಸುಳಿಗೆ ಸಿಲುಕಿರುವ ರೈತರೆಲ್ಲರಿಗೂ ಮುಂದಿನ ಬಿತ್ತನೆಗೆ ಅಗತ್ಯ ಅನುಕೂಲ ಸರ್ಕಾರವೇ ಮಾಡಿಕೊಡಬೇಕು. ಮೇವು ಮತ್ತು ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಂ.ಚಂದ್ರಪ್ಪ, ಬಿ.ಪಿ.ಹರೀಶ್, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರಳಿ, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬಂಡವಾಡ, ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮುಖಂಡರಾದ ಸಂಪತ್‌ಕುಮಾರ್, ಜಿ.ಎಸ್.ಅನಿತ್‌ಕುಮಾರ್, ನರೇಂದ್ರ, ಗಿರೀಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net