

ಚಳ್ಳಕೆರೆ: ದೊಡ್ಡಉಳ್ಳಾರ್ತಿ ಕಾವಲು ಭೂಮಿಯಲ್ಲಿರುವ ಬೋರೆ ದೇವರ ಜಾತ್ರಾ ಮಹೋತ್ಸವ ಆಚರಣೆ ಅನುಕೂಲಕ್ಕಾಗಿ 15 ಎಕರೆ ಭೂಮಿಯನ್ನು ಬಿಟ್ಟು ಕೊಡುವಂತೆ ಸಣ್ಣ ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಸೂಚಿಸಿದರು.
ತಾಲೂಕಿನ ದೊಡ್ಡ ಉಳ್ಳಾರ್ತಿ ಸಮೀಪದ ಬೋರೆ ದೇವರ ಪ್ರದೇಶದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಥಳೀಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಣ್ಣ ಕೈಗಾರಿಕಾ ಇಲಾಖೆ ಅಭಿವೃದ್ಧಿ ಕಾರ್ಯಗಳಿಗೆ 250 ಎಕರೆ ಕಾವಲು ಜಮೀನು ಬಳಕೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಸ್ಥಳೀಯ ಭಕ್ತರು ಅನೇಕ ವರ್ಷಗಳಿಂದ ಬೋರೆ ದೇವರ ಆಚರಣೆಯಲ್ಲಿ ಬುಡಕಟ್ಟು ಪದ್ಧತಿಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಸಿಕೊಂಡು ಬರುವ ವಾಡಿಕೆ ಇದೆ. ಭಕ್ತರ ಬೇಡಿಕೆಯಂತೆ ದೇವರ ಪೂಜಾ ಕಾರ್ಯಕ್ರಮಗಳ ಅನುಕೂಲಕ್ಕಾಗಿ 50 ಎಕರೆ ಮೀಸಲಿಡುವಂತೆ ಬೇಡಿಕೆಯಿದೆ. ಕೊನೇಪಕ್ಷ 15 ಎಕರೆ ಭೂಮಿಯನ್ನು ದೇವರ ಕಾರ್ಯಕ್ಕೆ ಬಿಟ್ಟು ಕೊಡುವಂತೆ ಸೂಚಿಸಿದರು.
ಮನವಿ: ದೊಡ್ಡಉಳ್ಳಾರ್ತಿ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾಡಬೇಕು. ಜಮೀನುಗಳಿಗೆ ರಸ್ತೆ, ರೈತರಿಗೆ 5 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ದೊಡ್ಡಉಳ್ಳಾರ್ತಿ, ಚಿಕ್ಕ ಉಳ್ಳಾರ್ತಿ, ತಳುಕು, ಚನ್ನಗಾನಹಳ್ಳಿ, ಯಾದಲಗಟ್ಟೆ ಮತ್ತು ಕಾಲುವೇಹಳ್ಳಿ ಗ್ರಾಮಗಳ ನಡುವೆ ರಸ್ತೆ ಅಭಿವೃದ್ಧಿ ಪಡಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ತಾಪಂ ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್, ಮುಖಂಡರಾದ ದೊಡ್ಡಉಳ್ಳಾರ್ತಿ ಕರಿಯಣ್ಣ, ಬಾಲರಾಜು, ಗುಡಿಹಳ್ಳಿ ರಂಗಣ್ಣ, ತಿಮ್ಮಣ್ಣ, ಬೂದಿಹಳ್ಳಿ ರಾಜಣ್ಣ, ಬಿ.ರಾಜಣ್ಣ, ಎಸ್‌ಟಿಡಿ ರಾಜು, ಓಬಣ್ಣ, ಜಯಣ್ಣ ಮತ್ತಿತರರು ಇದ್ದರು.