ಬರ ಘೋಷಿಸಿ ಪರಿಹಾರ ನೀಡಿ:ಸರ್ಕಾರಕ್ಕೆ ಶ್ರೀರಾಮುಲು ಆಗ್ರಹ

SRIRAMULU
Published on

ಕೊಪ್ಪಳ: ರಾಜ್ಯದಲ್ಲಿ ಬರ ತಾಂಡವಾಡುತ್ತಿದ್ದು, ಸರ್ಕಾರ ಕಣ್ಮುಚ್ಚಿ ಕುಳಿತಿದೆ. ತಕ್ಷಣವೇ ಬರ ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.


ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ರಾಜ್ಯ ಸರ್ಕಾರಕ್ಕೆ ಬಹುಮತವಿದ್ದು, ಐದು ವರ್ಷ ಆಡಳಿತ ಪೂರ್ಣಗೊಳಿಸಲಿದೆ. ಈಗ ನೂರು ದಿನವಾಗಿದ್ದು, ಯಾವೊಂದು ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಘೋಷಿಸಿದ ಐದು ಗ್ಯಾರಂಟಿಗಳು ಸರಿಯಾಗಿ ಜನರನ್ನು ತಲುಪಿಲ್ಲ. ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿಗಳು ಮುಂದುವರೆಯಲಿವೆ. ಐದು ವರ್ಷ ದೊರೆಯುವ ಗ್ಯಾರಂಟಿ ಇಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಶೇ.50ರಷ್ಟು ಲಂಚ ಪಡೆಯಲಾಗುತ್ತಿದೆ. ವರ್ಗಾವಣೆ ದಂಧೆ ನಡೆದಿದೆ. ನೌಕರರಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಕಾಂಗ್ರೆಸ್ ಶಾಸಕರೇ ಮಂತ್ರಿಗಳು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತು ಮೊದಲಿನಷ್ಟು ಗಡುಸಾಗಿಲ್ಲ ಎಂದು ತಿವಿದರು.


ರಾಜ್ಯದಲ್ಲಿ 130ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ. ಜನ-ಜಾನುವಾರು ನೀರಿಲ್ಲದೆ ಪರದಾಡುತ್ತಿದ್ದಾರೆ. ನೆರವಿಗೆ ಬರಬೇಕಾದ ಸರ್ಕಾರ ಸಮೀಕ್ಷೆ ನಡೆಸುವುದಾಗಿ ಹೇಳುತ್ತಿದೆ. ಈ ಹಿಂದೆ ಸಮೀಕ್ಷೆ ನಡೆಸಿ ಬರ ಘೋಷಿಸಿಲ್ಲ. ರೈತರು ಸತ್ತ ಮೇಲೆ, ಗುಳೆ ಹೋದ ಮೇಲೆ ಪರಿಹಾರ ನೀಡುವರಾ ? ತಕ್ಷಣ ಬರ ಘೋಷಿಸಿ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಜನರ ದಿಕ್ಕು ತಪ್ಪಿಸಲು ಆಪರೇಷನ್ ಹಸ್ತ ವಿಷಯ ತೇಲಿಬಿಟ್ಟಿದ್ದಾರೆ. ಬಹುಮತಕ್ಕೆ ಬೇಕಾದಕ್ಕಿಂತ ಹೆಚ್ಚು ಶಾಸಕರಿದ್ದಾರೆ. ಹೀಗಿದ್ದರೂ ಆಪರೇಷನ್ ಹಸ್ತ ನಡೆಸುವುದಾಗಿ ಹೇಳುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.


ಸಂಸದ ಸಂಗಣ್ಣ ಕರಡಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಚೇತನ ಮಹಾಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಮೂಲಕ ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ, ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆಸುವುದು ಮುಖ್ಯ ಉದ್ದೇಶ. ಆ.25ರಿಂದ ಅಭಿಯಾನ ಆರಂಭವಾಗಿದೆ. ವಿಧಾನಸಭೆ ಕ್ಷೇತ್ರವಾರು ಮೂರು ಜನರ ಸಮಿತಿ ರಚಿಸಿದ್ದು, ಅವರು ಬಿಎಲ್‌ಒಗಳ ಸಂಪರ್ಕದಲ್ಲಿದ್ದು, ಈ ಕಾರ್ಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.


ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಮಾಜಿ ಸಚಿವ ನಾಗಪ್ಪ ಸಾಲೋಣಿ, ಮಂಜುಳಾ ಕರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net