ಬಯಸಿದ ಸಾಧನೆಗೆ ಬೇಕು ಪರಿಶ್ರಮ

12BK1 (1)
Published on

ಬಸವಕಲ್ಯಾಣ: ಸಾಧಿಸುವ ಛಲ ಇದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗದು. ವಿದ್ಯಾರ್ಥಿನಿಯರು ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಐದು ವರ್ಷ ಶ್ರಮವಹಿಸಿ ಅಧ್ಯಯನ ಮಾಡಿದರೆ ಅಂದುಕೊಂಡ ಸಾಧನೆ ಮಾಡಬಹುದು ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ನೀಲಾಂಬಿಕಾ ಸರ್ಕಾರಿ ಪದವಿಪೂರ್ವ (ಬಾಲಕಿಯರ) ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಪಿಯುಸಿಯಿಂದ ಪದವಿವರೆಗೆ ಐದು ವರ್ಷ ಶ್ರದ್ಧೆಯಿಂದ ಓದಿದರೆ ಮಹತ್ತರ ಸಾಧನೆ ಮಾಡಬಹುದು. ನಿರ್ಲಕ್ಷಿಸಿದರೆ ೫೦ ವರ್ಷ ಕಣ್ಣೀರು ಹಾಕಬೇಕಾಗುತ್ತದೆ. ಐಎಎಸ್, ಐಪಿಎಸ್ ಪಾಸಾಗುವುದು ದೊಡ್ಡದಲ್ಲ. ನೀವು ಮನಸ್ಸು ಮಾಡುವುದು ಮುಖ್ಯ. ಸಾಧನೆಗೆ ಗಟ್ಟಿ ಮನಸ್ಸು, ಕಠಿಣ ಪರಿಶ್ರಮ ಬೇಕು. ಜಗತ್ತಿನಲ್ಲಿ ಮುಕ್ತ ಪ್ಲಾಟ್‌ಫಾರ್ಮ್ ಇದೆ. ಶಕ್ತಿ, ಪ್ರತಿಭೆ ತೋರಿಸಲು ಅವಕಾಶವಿದೆ ಎಂದರು.
ಪ್ರಾಚಾರ್ಯ ಸುರೇಶ ಅಕ್ಕಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲ ಸೌಲಭ್ಯ ಒದಗಿಸುತ್ತಿದ್ದು, ಸದ್ಬಳಕೆ ಮಾಡಿಕೊಂಡು ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆಯಬೇಕು ಎಂದು ಸಲಹೆ ನೀಡಿದರು.
ಮುಖಂಡ ದೀಪಕ ಗಾಯಕವಾಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಜ್ಞಾನೇಶ್ವರ ಮುಳೆ, ಸುರೇಶ ಮೋರೆ, ವಿಷ್ಣು ಜಮಾದಾರ, ಲತಾ ಕಟಕೆ, ಅಶ್ವಿನ್ ಗೋರ್ಟೆ ಇತರರಿದ್ದರು. ಅಶೋಕರೆಡ್ಡಿ ಸ್ವಾಗತಿಸಿದರು. ಡಾ.ಮಹಾಲೇಶ ವಂದಿಸಿದರು. ಸವಿತಾ ಶಿವಾನಂದ ನಿರೂಪಣೆ ಮಾಡಿದರು.
ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ ಕಾಲೇಜಿನ ಕಟ್ಟಡ ಇತರ ಅವಶ್ಯಕತೆ ಕುರಿತು ಶಾಸಕರ ಗಮನಕ್ಕೆ ತಂದು ಮನವಿಪತ್ರ ಸಲ್ಲಿಸಿದರು. ಸ್ಪಂದಿಸಿದ ಶಾಸಕರು ಕ್ರಮದ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net