

ಮೈಸೂರು: ಸುಖ, ನೆಮ್ಮದಿ, ಸಂತೋಷ ಸುಮ್ಮನೆ ಬರುವುದಲ್ಲ. ಅದಕ್ಕಾಗಿ ಪ್ರಯತ್ನ ಪಡಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್, ರೇಡಿಯೋ ಜಾಕಿ (ಆರ್‌ಜೆ) ಅವಿನಾಶ್ ಸಹಯೋಗದಲ್ಲಿ ಭಾನುವಾರ ಶ್ರೀ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣೋತ್ಸವ ಕ್ಯೂಟ್ ಲಿಟಲ್ ಕೃಷ್ಣ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಖ, ನೆಮ್ಮದಿಯಿಂದ ಬದುಕಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅದು ಬಯಸಿದ ಮಾತ್ರಕ್ಕೆ ಬರುವುದಿಲ್ಲ. ಅದಕ್ಕೆ ಪ್ರಯತ್ನ ಪಡಬೇಕು. ನಾವು ಪ್ರಯತ್ನ ಪಟ್ಟು ಸುಖ ಸಂಪಾದಿಸಿಕೊಳ್ಳಬೇಕು. ನಮ್ಮ ಸುಖದ ಪ್ರಯತ್ನದಿಂದ ಇತರರಿಗೆ ದುಃಖವಾಗಬಾರದು. ಎಲ್ಲರ ಸುಖಕ್ಕಾಗಿ ಪ್ರಯತ್ನ ಪಡುವುದೇ ನಿಜವಾದ ಧರ್ಮ. ಕೃಷ್ಣ ಸೇರಿದಂತೆ ಸಜ್ಜನರು ಹೀಗೆ ಬಾಳಿ ಬದುಕಿದ್ದರು. ಆದರೆ ಲೋಕದಲ್ಲಿ ಒಳ್ಳೆಯದು ಇದ್ದರೆ ನನಗೆ ಬೇಕು ಎನ್ನುತ್ತಾ ಯಾರಿಗೆ ಏನೇ ದುಃಖವಾದರೂ ಚಿಂತೆ ಮಾಡದೆ ಇರುವವರೇ ದುರ್ಜನರು ಎಂದು ಹೇಳಿದರು.
ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನ ಕಾರ್ಯದರ್ಶಿ ಮಹೇಶ್ ಎನ್.ಅರಸು, ಪ್ರಾಂಶುಪಾಲ ಶ್ರೀವತ್ಸ, ಆರ್‌ಜೆ ಅವಿನಾಶ್ ಇತರರು ಇದ್ದರು. ಕೃಷ್ಣ, ರಾಧೆ ವೇಷ ಧರಿಸಿದ ಮಕ್ಕಳು ಸಂಭ್ರಮ ಹೆಚ್ಚಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.