

ಚಿತ್ರದುರ್ಗ:ಎಲ್ಲರ ಸಹಕಾರದೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಹೇಳಿದರು.
ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿ, ನಗರದ ಅಭಿವೃದ್ಧಿ ಕುರಿತಂತೆ ದೂರದೃಷ್ಟಿ ಇಟ್ಟುಕೊಂಡಿರುವ ಶಾಸಕರು ಹಾಗೂ ಅಧಿಕಾರಿ,ಸಿಬ್ಬಂದಿ ಸಹಕಾರದಿಂದ ಚಿತ್ರದುರ್ಗದ ಪ್ರಗತಿಗೆ ಕೆಲಸ ಮಾಡುತ್ತೇನೆ, ಜನರ ನಿರೀಕ್ಷೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗುವುದೆಂಬ ವರಿಷ್ಠರ ಮಾತಿನಂತೆ ತಮಗೆ ಈ ಅವಕಾಶ ದೊರೆತಿದೆ. ನನಗೆ ಇದು ಬಯಸದೆ ಬಂದಿರುವ ಭಾಗ್ಯ. ಹಲವು ವರ್ಷಗಳಿಂದ ದುಡಿದಿರುವ ಕಾರ್ಯಕರ್ತರಿಗೆ ಈ ಸ್ಥಾನ ನೀಡುವಂತೆ ವರಿಷ್ಠರಿಗೆ ಡಿಸಿಸಿ ಅಧ್ಯಕ್ಷನಾಗಿ ತಿಳಿಸಿದ್ದೆ. ಅದರೆ ಮೊದಲಿಗೆ ಜಿಲ್ಲಾಧ್ಯಕ್ಷರಿಗೆ ಜವಾಬ್ದಾರಿ ನೀಡುವುದಾಗಿ ತಿಳಿಸಿದ್ದರು. ಅವರ ಆದೇಶವನ್ನು ಪಾಲಿಸಿದ್ದೇನೆ ಎಂದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಪಕ್ಷಕ್ಕೆ ತಾಜ್‌ಪೀರ್ ಸಲ್ಲಿಸಿರುವ ಸೇವೆ ಗುರುತಿಸಿ ವರಿಷ್ಠರು ಅಧಿಕಾರ ಕೊಟ್ಟಿದ್ದಾರೆ. ಅನುಭವಿ ಆಗಿರುವ ಅವರ ಸಹಕಾರದೊಂದಿಗೆ ಚಿತ್ರದುರ್ಗವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.
ಕುಡಾ ಆಯುಕ್ತ ಸೋಮಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಪಾಪಯ್ಯ, ಪಕ್ಷದ ಜಿಲ್ಲಾ ಕಾರ‌್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮುಖಂಡರಾದ ನೇತಾಜಿ ತಿಪ್ಪೇಸ್ವಾಮಿ, ಸುರೇಶ್‌ಬಾಬು, ಖಾಸಿಂ ಆಲಿ, ಎನ್.ಡಿ.ಕುಮಾರ್, ಲಕ್ಷ್ಮೀಕಾಂತ್, ಪೈಲ್ವಾನ್ ತಿಪ್ಪೇಸ್ವಾಮಿ, ವಿಜಯಕುಮಾರ್, ಸುದರ್ಶನ್, ಮಧುಗೌಡ ಮತ್ತಿತರು ಇದ್ದರು.