ಬಯಲುಸೀಮೆಯಲ್ಲಿ ವರುಣ ಆರ್ಭಟ

18 bgp rain news photo (3)
Published on

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲ ಮೂಲಗಳಿಗೆ ಜೀವಕಳೆ ಬಂದಿದೆ. ಶನಿವಾರ ರಾತ್ರಿ 8 ಗಂಟೆಗೆ ಪ್ರಾರಂಭವಾದ ವರ್ಷಧಾರೆ ನಡುರಾತ್ರಿಯವರೆಗೂ ಸುರಿದಿದ್ದು, ಅಲ್ಲಲ್ಲಿ ಅವಾಂತರಗಳಾಗಿವೆ.

ಚಿತ್ರಾವತಿ, ಉತ್ತರ ಪಿನಾಕಿನಿ ನದಿ ಉಕ್ಕಿ ಹರಿದಿದ್ದರೆ, ಚಿಕ್ಕಬಳ್ಳಾಪುರ ತಾಲೂಕಿನ ನಂದಿ, ಮಂಡಿಕಲ್, ದಿಬ್ಬೂರು, ಶಿಡ್ಲಘಟ್ಟ ತಾಲೂಕಿನ ಕೊಮ್ಮಸಂದ್ರ, ದೊಡ್ಡತೇಕಹಳ್ಳಿ ಸೇರಿ ಹಲವೆಡೆ ನಿರ್ಮಾಣವಾಗಿರುವ ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಚಿಕ್ಕಬಳ್ಳಾಪುರದ ಕಂದವಾರ ಕೆರೆ ಕೋಡಿ ಹರಿಯಲು ಅರ್ಧ ಅಡಿ ಅಷ್ಟೇ ಬಾಕಿ ಇದೆ.

ಬಾಗೇಪಲ್ಲಿಯ ವಂಡಮಾನ್ ಅಣೆಕಟ್ಟು ಕೋಡಿ ಹರಿಯುತ್ತಿದ್ದರೆ ಗೌರಿಬಿದನೂರಿನ ಕಿಂಡಿ ಅಣೆಕಟ್ಟೆ, ಗುಡಿಬಂಡೆಯ ಅಮಾನಿಭೈರಸಾಗರಕ್ಕೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ.

ಜನಜೀವನ ಅಸ್ತವ್ಯವಸ್ತ: ಜಿಲ್ಲಾ ಕೇಂದ್ರದ ದರ್ಗಾ ಮೊಹಲ್ಲಾ, ಎಪಿಎಂಸಿ ಮಾರುಕಟ್ಟೆ, ಹೊಸ ಖಾಸಗಿ ಬಸ್ ನಿಲ್ದಾಣ, ಸಾಧುಮಠ ವೃತ್ತ, ಜಿಲ್ಲಾಸ್ಪತ್ರೆ ಮುಂಭಾಗ ಸೇರಿ ವಿವಿಧೆಡೆ ರಸ್ತೆ ಗುಂಡಿಗಳಲ್ಲಿ ನೀರು ನಿಂತುಕೊಂಡ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು. ನಕ್ಕಲಕುಂಟೆ, ಕಂದವಾರ ಬಾಗಿಲು ಸೇರಿ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಟ್ಟರು. ಬಿರುಗಾಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎಲ್ಲೆಡೆ ಕಗ್ಗತ್ತಲಿನ ವಾತಾವರಣ ನಿರ್ಮಾಣವಾಗಿತ್ತು.

ಜಲಾಶಯಕ್ಕೆ ಒಂದು ಮೀಟರ್ ನೀರು : ಇಡೀರಾತ್ರಿ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರದ ಕುಡಿಯುವ ನೀರಿನ ಮೂಲವಾದ ಜಕ್ಕಲಮಡು ಜಲಾಶಯಕ್ಕೆ ಒಂದು ಮೀಟರ್ ನೀರು ಹರಿದು ಬಂದಿದೆ. ಕೋಡಿ ಹೋಗಲು 1 ಮೀಟರ್ ಅಷ್ಟೇ ಬಾಕಿ ಇದೆ. ಪೋಶೆಟ್ಟಹಳ್ಳಿ ಸುತ್ತಲಿನ ಬೆಟ್ಟದ ತಪ್ಪಲಿನಲ್ಲಿ ಮಳೆ ಸುರಿದ್ದಿದ್ದರಿಂದ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲು ಕಾರಣವಾಗಿದೆ. ಇನ್ನೊಮ್ಮೆ ಧಾರಾಕಾರ ಮಳೆ ಸುರಿದರೆ ಕೋಡಿ ಹರಿಯಲಿದೆ. ಪ್ರಸ್ತುತ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿರುವುದರಿಂದ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಪೌರಾಯುಕ್ತ ಡಿ.ಲೋಹಿತ್.

ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಸದಸ್ಯರಾದ ನಾಗರಾಜ್, ಯತೀಶ್ ಸೇರಿ ಹಲವರು ಜಲಾಶಯಕ್ಕೆ ಭೇಟಿ ನೀಡಿ, ಸ್ಥಿತಿ-ಗತಿಗಳನ್ನು ವೀಕ್ಷಿಸಿದರು.

ತೋಟಗಳಿಗೆ ನುಗ್ಗಿರುವ ನೀರು : ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿಕ್ಕಬಳ್ಳಾಪುರ ತಾಲೂಕಿನ ಚಲಕಾಯಲಪರ್ತಿ ಸೇರಿ ಹಲವೆಡೆ ರೈತರ ತೋಟಗಳಿಗೆ ನೀರು ನುಗ್ಗಿದೆ. ಈಗಾಗಲೇ ಕಂದವಾರ, ಅಮಾನಿಗೋಪಾಲಕೃಷ್ಣ ಕೆರೆ, ಅಮಾನಿ ರಂಗಧಾಮ ಕೆರೆ ಸೇರಿ ಹಲವು ಕೆರೆಗಳಿಗೆ ಎಚ್.ಎನ್.ವ್ಯಾಲಿ ತ್ಯಾಜ್ಯ ಸಂಸ್ಕರಿಸಿದ ನೀರು ಹರಿಸಲಾಗುತ್ತಿದೆ. ಜತೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಕೆರೆ ಮತ್ತು ಕಾಲುವೆಗಳ ಸ್ಥಿತಿ-ಗತಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿರುವುದರಿಂದ ನೀರು ವ್ಯರ್ಥವಾಗುತ್ತಿರುವುದಲ್ಲದೆ ಟೊಮ್ಯಾಟೊ, ದ್ರಾಕ್ಷಿ, ಗುಲಾಬಿ ತೋಟಗಳಿಗೆ ನುಗ್ಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net