

ಅಭಿವೃದ್ಧಿ, ಕಾಮಗಾರಿಗಳಿಗೆ, ಸಚಿವ ಎಂ.ಬಿ. ಪಾಟೀಲ, ಚಾಲನೆ,
ವಿಜಯಪುರ: ಸಮಗ್ರ ನೀರಾವರಿ ಯೋಜನೆಗಳಿಂದ ಕೃಷಿ, ಅರಣ್ಯ, ತೋಟಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಬರುವ ದಿನಗಳಲ್ಲಿ ಸಹಕಾರಿ, ಪಶುಸಂಗೋಪನೆ, ಮೀನುಗಾರಿಕೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವ ಮೂಲಕ ಬಬಲೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಬಬಲೇಶ್ವರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಗುರುವಾರ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪೂಜ್ಯ ಲಿಂ. ಸಿದ್ಧೇಶ್ವರ ಶ್ರೀಗಳ ಆಶಯದಂತೆ ಈಗಾಗಲೇ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಬಾಕಿ ಇರುವ ಯೋಜನೆಗಳ ಅನುಷ್ಟಾನಕ್ಕೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ರೂ.1.25 ಕೋಟಿ ವೆಚ್ಚದ ಅಲ್ಲಿಸಾಬ ವಸ್ತಿಯಿಂದ ಗುಂಡು ಸತ್ಯಪ್ಪ ಮಾಳಿ ವಸ್ತಿ(ಕರೆಮ್ಮ ದೇವಸ್ಥಾನದ ಹತ್ತಿರ) ವರೆಗೆ 3 ಕಿಮೀ ರಸ್ತೆ ಸುಧಾರಣೆ ಕಾಮಗಾರಿ ಮತ್ತು ರೂ. 1.50 ಕೋಟಿ ವೆಚ್ಚದ ಕನಮಡಿ- ತೆಲಸಂಗ 4 ಕಿಮೀ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವರು, ತುಬಚಿ- ಬಬಲೇಶ್ವರ ಏತನೀರಾವರಿ ಹೊಲಗಾಲುವೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.
ತಿಕೋಟಾ ಹೋಬಳಿ ಕುಡಿಯಲು ನೀರು ಕೊಡಲೂ ಕಷ್ಟಸಾಧ್ಯ ಎಂದು ಕೆಲವರು ಹೇಳಿದ್ದರು. ಆದರೆ, 2013-18ರ ವರೆಗೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಅಸಾಧ್ಯ ಎಂಬುದನ್ನು ಸಾಧ್ಯ ಮಾಡಿ ತೋರಿಸಿದ್ದೇನೆ. ಧರಿದೇವರು, ಸಿದ್ಧೇಶ್ವರ ಸ್ವಾಮಿ, ನಮ್ಮ ತಂದೆ, ತಮ್ಮೆಲ್ಲರ ಆಶೀರ್ವಾದದಿಂದ ಇಡೀ ದೇಶದಲ್ಲಿಯೇ ಹೋಬಳಿಯೊಂದಕ್ಕೆ ಅತೀ ಹೆಚ್ಚು ಅಂದರೆ ರೂ. 3600 ಕೋಟಿ ವೆಚ್ಚದಲ್ಲಿ ನೀರಾವರಿ ಮಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಒಂಬತ್ತು ಮುಖ್ಯ ಸ್ಥಾವರ ನಿರ್ಮಿಸಿ 1000 ಕಿ ಮೀ ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಹಳ್ಳಗಳಲ್ಲಿ ಒತ್ತುವರಿಯಿಂದಾಗಿ ಜಮೀನುಗಳಿಗೆ ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಂತೆ ತ್ವರಿತವಾಗಿ ಸ್ಪಂದಿಸಿದ ಸಚಿವರು, ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ್ ಪ್ರಶಾಂತ ಚನಗೊಂಡಗೆ ಒತ್ತುವರಿ ಸಮೀಕ್ಷೆ ನಡೆಸುವಂತೆ ಸೂಚಿಸಿದರು.
ರೈತರ ಮುಖಂಡ ಸೋಮನಾಥ ಬಾಗಲಕೋಟ, ಕರ್ನಾಟಕ ನೀರಾವರಿ ನಿಗಮದ ಎಇಇ ರಾಜೇಂದ್ರ ರೂಢಗಿ ಮಾತನಾಡಿದರು.
ಮಾನಿಂಗ ಜವನರ, ಶಿವಪುತ್ರ ಅವಟಿ, ಬಾಬುಗೌಡ ಬಿರಾದಾರ, ಸಿದ್ದು ಗೌಡನವರ, ಮಲ್ಲಿಕಾರ್ಜುನ ಬಸಗೊಂಡವರ, ಶಂಕರಗೌಡ ಬಿರಾದಾರ, ಸುರೇಶ ಬಾಬಾನಗರ, ಎಂ.ಸಿ. ತಳವಾರ, ಪಿ.ಡಿ. ಪಾಟೀಲ, ಶಂಕರ ಹಾಮಗೋಳ ಮತ್ತಿತರರಿದ್ದರು. ಶಿಕ್ಷಕ ಚನ್ನಯ್ಯ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.
ಬಿಜ್ಜರಗಿ ಬಳಿಯ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯಲ್ಲಿ ಬರುವ ವಿತರಣೆ ಕಾಲುವೆ- 4ಕ್ಕೆ ನೀರು ಹರಿಸುವ ಸಮಸ್ಯೆಯನ್ನು ಕೇವಲ 20 ದಿನಗಳಲ್ಲಿ ಬಗೆಹರಿಸಿ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಖುದ್ದಾಗಿ ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಸಚಿವ ಎಂ.ಬಿ. ಪಾಟೀಲ ಗಮನ ಸೆಳೆದರು.
ಮುಖಂಡರಾದ ಸೋಮನಾಥ ಬಾಗಲಕೋಟ, ಮಲ್ಲು ಲೋಣಿ, ಸುಭಾಸಗೌಡ ಪಾಟೀಲ, ಸಿದ್ದು ಗೌಡನವರ, ಗುರು ಮಾಳಿ, ರಾಜು ಮಸಳಿ, ಶಿವಪ್ಪ ಪೂಜಾರಿ, ಮದಗೊಂಡ ಬಿರಾದಾರ, ಬಸು ಸೌದಿ, ಸುಭಾಸ ಮೆಂಡೇಗಾರ, ಪರಮೇಶ್ವರ ದೊಡಮನಿ, ಶೇಖಸಾಬ ಮುಲ್ಲಾ, ಕರ್ನಾಟಕ ನೀರಾವರಿ ನಿಗಮದ ಎಇಇ ರಾಜೇಂದ್ರ ರೂಡಗಿ, ತಾಪಂ ಇಒ ಬಸವರಾಜ ಐನಾಪುರ ಇದ್ದರು.