

ಆನೇಕಲ್: ಬನ್ನೇರುಘಟ್ಟಕ್ಕೆ ಕಾವೇರಿ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ತಿಳಿಸಿದರು.
ಬನ್ನೇರುಘಟ್ಟ ಉದ್ಯಾನವನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಚಿವರು ಅರಣ್ಯ ಇಲಾಖೆಯಿಂದ ಆಗಬೇಕಾಗಿರುವ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಜೈವಿಕ ಉದ್ಯಾನವನದ ಕೆರೆಗಳಲ್ಲಿ ಸಾಕಷ್ಟು ನೀರಿದ್ದು, ಈ ಬಾರಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ನೀರನ್ನು ಒದಗಿಸಲು ಸಾಧ್ಯವಾದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅರಣ್ಯ ಇಲಾಖೆಯಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಮಾಹಿತಿ ಪಡೆಯಲಾಗಿದೆ. ರಾಜ್ಯದಾದ್ಯಂತ ಮಾಹಿತಿ ಪಡೆಯಲಾಗುವುದು. ಹಾಗೆಯೇ ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ನಡೆಯಲಿದ್ದು, ಅರಣ್ಯ ಇಲಾಖೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಆಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುತ್ತಿದೆ ಎಂದರು.
ಬನ್ನೇರುಘಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೆ ಈ ಬಗ್ಗೆ ಚರ್ಚಿಸಿ ಇಲ್ಲಿನ ಅಧಿಕಾರಿಗಳು ನೀಡುವ ಸಲಹೆ ಮೇರೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.
ಪ್ರಾಣಿಗಳ ಸ್ವಾತಂತ್ರ್ಯವನ್ನು ನಾವು ಕಸಿದುಕೊಂಡಿದ್ದೇವೆ. ಪ್ರಾಣಿಗಳನ್ನು ಬಂದೀಖಾನೆಯಲ್ಲಿ ಇಟ್ಟಿದ್ದೇವೆ. ಅವುಗಳಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಎಂದರು.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ಸಿಂಗ್, ಡಿಡಿ ಕುಶಾಲಪ್ಪ ಹಾಗೂ ಅರಣ್ಯ ಇಲಾಖೆ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.
ಆರೋಪ ಸಲ್ಲ: ಮಾಜಿ ಸಚಿವ ರೇವಣ್ಣ ಅವರು ಹಿರಿಯರಿದ್ದಾರೆ. ಕಳ್ಳನ ಕೈಗೆ ಕೀ ಕೊಟ್ಟಿದ್ದಾರೆ ಎನ್ನುವ ಅವರ ಆರೋಪ ಸರಿಯಿಲ್ಲ. 20 ವರ್ಷ ನಾನು ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನನಗೂ ಆಗು-ಹೋಗುಗಳ ಬಗ್ಗೆ ಅರಿವಿದೆ. ಮಾತಿನ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನನ್ನನ್ನು ಸಚಿವನಾಗಿ ಮಾಡಿದ್ದು ಉತ್ತಮ ಕೆಲಸ ಮಾಡಲು. ಅದನ್ನು ಮಾಡಿ ತೋರಿಸುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಪಾರ್ಕ್ ಎಲ್ಲೆಡೆ ಸಾರಿ: ಅರಣ್ಯ ಇಲಾಖೆ ಸಚಿವರಾದ ಮೊದಲ ಬಾರಿಗೆ ಆನಂದ್ ಸಿಂಗ್ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಪಾರ್ಕ್ ಹಾಗೂ ಜೂ ವೀಕ್ಷಣೆ ಮಾಡಿದರು. ಅಧಿಕಾರಿಗಳ ಜತೆ ಹುಲಿ, ಸಿಂಹ, ಕರಡಿ ಸಫಾರಿ ವೀಕ್ಷಿಸಿದರು. ಹೀಗೆಕಟ್ಟೆ ಬಳಿ ಇರುವ ಆನೆ ಕೇಂದ್ರಕ್ಕೆ ಭೇಟಿ ನೀಡಿ ಆನೆ ಶಿಬಿರದಲ್ಲಿ ಕೆಲ ಹೊತ್ತು ಸಮಯ ಕಳೆದರು. ಆನೆಗಳಿಗೆ ಬೆಲ್ಲ ತಿನಿಸುವ ಮೂಲಕ ಮಾವುತರ ಯೋಗಕ್ಷೇಮ ವಿಚಾರಿಸಿದರು.