ಬನ್ನೂರಿನಲ್ಲಿ ರೈತರಿಂದ ರಸ್ತೆ ಸಂಚಾರ ತಡೆ

31 bannur 1
Published on

ಬನ್ನೂರು: ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ಗುರುವಾರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.


ರೈತರ ಬೆಳೆಗೆ ನೀರಿಲ್ಲ, ಬೆಳೆದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಳೆಯ ಅಭಾವದಿಂದ ರೈತ ಕೆಂಗೆಟ್ಟು ಕುಳಿತಿದ್ದರೂ ನಮ್ಮ ಸರ್ಕಾರಕ್ಕೆ ಮಾತ್ರ ತಮಿಳು ರೈತರ ಮೇಲಿನ ಪ್ರೇಮದಿಂದ ಕೇಳಿದಷ್ಟು ನೀರು ಬಿಟ್ಟು ಇಲ್ಲಿನ ರೈತರ ಶೋಷಣೆ ಮಾಡುತ್ತಿರುವುದು ಸರಿಯೇ? ನಮಗೆ ನೀರು ಕೊಡಿ, ಇಲ್ಲವೇ ವಿಷ ಕೊಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಅಧ್ಯಕ್ಷ ಹುಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರ ಬಂದರೂ ರೈತರ ಪರವಾಗಿ ಇರುವುದಿಲ್ಲ ಎಂದು ಬೇಸರಿಸಿದ ಅವರು, ಪ್ರಸ್ತುತ ನೀರಿನ ಅಭಾವ ಇದ್ದು, ಪರಿಸ್ಥಿತಿ ಕಣ್ಣ ಮುಂದೆ ನೋಡುತ್ತಿರುವಂತಹ ಸರ್ಕಾರ ರೈತ ವಿರೋದಿ ಕೆಲಸ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ನೆರೆಯ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈಗಾಗಲೆ ರೈತರ ಬೆಳೆದ ಭತ್ತ, ಕಬ್ಬು, ಹಸುವಿನ ಮೇವು ಸೇರಿದಂತೆ ಎಲ್ಲ ಬೆಳೆಗಳು ಒಣಗಿ ನೆಲ ಕಚ್ಚಿದ್ದು, ಬ್ಯಾಂಕ್‌ನಿಂದ ಪಡೆದ ಸಾಲ ತೀರಿಸಲಾರದ ಪರಿಸ್ಥಿತಿ ತಲುಪಿದೆ. ಬೆಳೆಗಳು ಕೈಗೆ ಬರುವಂತಹ ಸಮಯದಲ್ಲಿ ನೀರು ನೀಡದೆ, ರೈತರನ್ನು ಈ ರೀತಿ ಶೋಷಣೆ ಮಾಡುವುದು ಅನ್ಯಾಯ ಎಂದು ಕಿಡಿಕಾರಿದರು.


ಬಳಿಕ ಸಂತೇಮಾಳದಿಂದ ಕಾವೇರಿ ವೃತ್ತದವರೆಗೆ ಜಾಥಾ ನಡೆಸಿ ಕಾರ್ಯಕರ್ತರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಕುಮಾರಸ್ವಾಮಿ, ಬಿ.ಟಿ.ಮಹೇಶ್, ಚಂದ್ರು, ಮಹೇಶ್, ಶಿವರಾಜು, ಜಯರಾಮು, ಮಹೇಶ್, ರಾಮಚಂದ್ರ, ರಾಮಚಂದ್ರ, ಕೆಂಪೇಗೌಡ, ಪ್ರಭು, ನಾಗರಾಜು, ದಿನೇಶ್, ಜಗದೀಶ್, ಸೀಹಳ್ಳಿರಾಜು, ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net