

ಬನ್ನಿಕುಪ್ಪೆ: ಆಂಧ್ರಪ್ರದೇಶದ ಅಧಿಕಾರಿಗಳ ತಂಡ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಅಧ್ಯಯನ ಪ್ರವಾಸದ ಅಂಗವಾಗಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲವು ವಿಷಯಗಳ ಕುರಿತು ಮಾಹಿತಿ ಪಡೆಯಿತು.
ನಂತರ ನಡೆದ ಕಾರ್ಯಾಗಾರದಲ್ಲಿ ಟಿ.ಎಂ.ಅಬುಬಕರ್, ಎಸ್.ಎಚ್.ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪ್ರಸನ್ನ ಅವರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಗ್ರಂಥಾಲಯ, ಅರಿವು ಕೇಂದ್ರ ಹಾಗೂ ಕೂಸಿನ ಮನೆ ಕುರಿತು ವಿಶ್ಲೇಷಣೆ ನೀಡಿದರು. ನಂತರ ಅಧಿಕಾರಿಗಳು ಆಯಾ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದರು.
ಎಸ್‌ಐಆರ್‌ಡಿ ರಾಮಕೃಷ್ಣ ವಿಜಯವಾಡ ಮಾತನಾಡಿ, ನಾವು 5 ದಿನ ಕರ್ನಾಟಕ ಪ್ರವಾಸ ಮಾಡಿದ್ದು, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯ ಗಂಗಾಜಲ(ಜೆಜೆಎಂ) ಮ-ನರೇಗಾ ಯೋಜನೆ, ಸಾರ್ವಜನಿಕ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಪರಿಶೀಲಿಸಿದ್ದೇವೆ. ನಮಗೆ 90 ಭಾಗ ಮೆಚ್ಚುಗೆಯಾಗಿದೆ. ಇದೇ ರೀತಿ ಬೇರೆ ರಾಜ್ಯದಲ್ಲೂ ಆದರೆ ಸಾರ್ವಜನಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ 40ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದು, ವಿಚಾರಗಳನ್ನು ಮಂಡಿಸಿದ್ದರು. ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೋವಿಂದ ನಾಯಕ್, ಕಾರ್ಯದರ್ಶಿ ವೇದಮೂರ್ತಿ, ಸಂಜೀವಿನಿ ಸ್ವ-ಸಹಾಯ ಮಹಿಳಾ ಒಕ್ಕೂಟ, ಪೌರಕಾರ್ಮಿಕರು, ಕಸ ವಿಲೇವಾರಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ನಂತರ ಮರದೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದ ತಂಡ, ಸಂಜೀವಿನ ಘಟಕ, ಮ-ನರೇಗಾ ಜಾಬ್ ಕಾರ್ಡ್, ಕೂಲಿ ಬೇಡಿಕೆ, ಬೆಳೆಗಳ ವಿಕ್ಷಣೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ, ಮುಖ್ಯ ಬೆಳೆಗಳ ಮಾಹಿತಿಯನ್ನು ಅಭಿವೃದ್ಧಿ ಅಧಿಕಾರಿ ಧರ್ಮೇಂದ್ರ ಅವರಿಂದ ಪಡೆದರು.