

ಕೊಪ್ಪ: ಬದ್ಧತೆ ಮತ್ತು ಪರಿಶ್ರಮ ಇದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು.
ನಾರ್ವೆ ಸ್ವಯಂಪ್ರಕಾಶ ಸರಸ್ವತಿ ವಿದ್ಯಾ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಗುರಿ ತಲುಪಲು ನಿರಂತರ ಅಭ್ಯಾಸ, ಪ್ರಯತ್ನ ಮಾಡಬೇಕು. ಕ್ರೀಡೆಯಲ್ಲಿ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದರು.
ಹಳ್ಳಿ ಜನರ ಪ್ರತಿಭೆ ಅನಾವರಣಕ್ಕೆ ದಸರಾ ಕ್ರೀಡಾಕೂಟ ವೇದಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ನೀಡಿ ಕ್ರೀಡಾಕೂಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ನನ್ನ ತಂದೆ ಬೇಗಾನೆ ರಾಮಯ್ಯ ಮಂತ್ರಿ ಆಗಿದ್ದಾಗ ಈ ಶಾಲೆ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಶಾಲೆಯಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಸಾಧ್ಯವಿದೆ. ಶಾಲಾ ಮಕ್ಕಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಗ್ರಾಮೀಣ ಭಾಗದ ಜನರ ಪ್ರತಿಭೆ ಅನಾವರಣಕ್ಕೆ ಸರ್ಕಾರ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಸ್ಪರ್ಧಾ ಭಾವನೆಯಿಂದ ಭಾಗವಹಿಸಿ, ಸಿಕ್ಕ ಅವಕಾಶ ಬಳಸಿಕೊಂಡು ಪ್ರತಿಭೆ ತೋರಿಸಬೇಕು ಎಂದರು.
ಆಪ್ತಶ್ರೀ ಯುವಕ ಸಂಘದ ಕಾರ್ಯದರ್ಶಿ ಓಣಿತೋಟ ರತ್ನಾಕರ್ ಮಾತನಾಡಿ, ದಸರಾ ಕ್ರೀಡಾಕೂಟ ಎಂದರೆ ಹಬ್ಬದ ವಾತಾವರಣ ಇತ್ತು. ನಂತರ ಕಾಟಾಚಾರಕ್ಕೆ ದಸರಾ ಕ್ರೀಡಾಕೂಟ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75 ಸಾವಿರ ರೂ. ನೀಡಿ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ಆಯೋಜನೆಗೆ ಒತ್ತು ಕೊಟ್ಟಿದ್ದಾರೆ. ಕ್ರೀಡಾಕೂಟಕ್ಕೆ 2 ಲಕ್ಷ ರೂ. ವ್ಯಯವಾಗುತ್ತಿದ್ದು ಉಳಿದ ಹಣವನ್ನು ದಾನಿಗಳ ನೆರವಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ಅಶೋಕ್ ನಾರ್ವೆ ಮಾತನಾಡಿ, ದಸರಾ ಕ್ರೀಡಾಕೂಟದಲ್ಲಿ ಎಲ್ಲ ವಯಸ್ಸಿನವರೂ ಭಾಗವಹಿಸಲು ಅವಕಾಶವಿದೆ. ಈ ದಿನ 400 ಕ್ರೀಡಾಪಟುಗಳು ಆಗಮಿಸಿದ್ದಾರೆ. ದಾನಿ ಗದ್ದಮನೆ ವಿಶ್ವನಾಥ್ ಅವರು ಮಧ್ಯಾಹ್ನ ಭೋಜನ ವ್ಯವಸ್ಥೆ ಕಲ್ಪಿಸಿದ್ದಾರೆ. ಕ್ರೀಡಾಕೂಟ ಆಯೋಜಿಸುವ ಬಗ್ಗೆ ನನಗೆ ಕರೆ ಬಂದಾಗ ನನ್ನ ಊರಿನಲ್ಲಿಯೇ ಆಯೋಜಿಸಲು ಮುಂದಾದೆವು. ದಾನಿಗಳ ಸಹಕಾರದಿಂದ ಈ ಬಾರಿ ಉತ್ತಮವಾಗಿ ದಸರಾ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗಿದೆ ಎಂದರು.
ನರಸೀಪುರ ಗ್ರಾಪಂ ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷೆ ಆಶಾ, ಸದಸ್ಯರಾದ ಅನಿಲ್‌ಕುಮಾರ್, ಪ್ರದೀಪ್, ಸುಜಾತಾ, ಪವಿತ್ರಾ ಕಾಡಪ್ಪ, ಯುವ ಸಾಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವಿನುತಾ, ಸ್ವಯಂಪ್ರಕಾಶ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ಚಂದ್ರಖರ್, ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್, ಭೂ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ, ಕೆಡಿಪಿ ಸದಸ್ಯರಾದ ರಾಜಶಂಕರ್, ಬಿ.ಪಿ.ಚಿಂತನ್, ಪ್ರಕಾಶ್, ಆರ್.ಡಿ.ರವೀಂದ್ರ, ನಿವೃತ್ತ ಮುಖ್ಯಶಿಕ್ಷಕ ನಿತ್ಯಾನಂದ, ರತ್ನಾಕರ್ ಭಟ್, ಎಸ್.ರಂಜಿತಾ ಇತರರಿದ್ದರು.