

ಕಮಲನಗರ: ಮಾನವನು ತನ್ನ ಬದುಕನ್ನು ರೂಪಿಸಿಕೊಳ್ಳಲು ಸಾಹಿತ್ಯ ಕ್ಷೇತ್ರ ಪೂರಕ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ರನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಠಾಣಾಕುಶನೂರ ಗ್ರಾಮದಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ನವದೆಹಲಿ, ಕರ್ನಾಟಕ ಜಾನಪದ ಪರಿಷತ್ ಔರಾದ್, ಠಾಣಾಕುಶನೂರ ಗ್ರಾಪಂ ಹಾಗೂ ಪ್ರಸನ್ನ ಕಲೆ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಜನಪದ ನೃತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜನಪದ ಸಂಸ್ಕೃತಿ ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆ. ಬದುಕಿನಲ್ಲಿ ತಾತ್ವಿಕತೆ ನೆಲೆಗಟ್ಟು ಮರೆಯಾಗಿ ತಂತ್ರಗಾರಿಕೆ ತುಂಬಿಕೊಂಡಿದೆ. ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ ಹಾಗೂ ಸಾಗರದಷ್ಟು ಆಳವಾಗಿದೆ. ಅದರಲ್ಲಿ ಬರುವ ಕಥೆ, ಗೀತೆ ಸೇರಿ ವಿಶ್ವ ಸಾಹಿತ್ಯದ ಮೂಲವನ್ನೆಲ್ಲ ಜನಪದದಲ್ಲಿ ಕಾಣಬಹುದು ಎಂದರು.
ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದ ಸಾಹಿತ್ಯ ಎಲ್ಲ ಭಾಷೆಗಳ ತವರೂರು. ಜನಪದ ಸಾಹಿತ್ಯ ಈಗ ನಶಿಸುತ್ತಿರುವುದು ಕಳವಳಕಾರಿ ವಿಷಯ. ದೇಶದ ಎಲ್ಲ ಹಳ್ಳಿಗಳಲ್ಲಿ ಜನಪದ ಸಾಹಿತ್ಯ ಕಣ್ಮರೆಯಾಗುತ್ತಿದೆ. ಜನಪದ ಸಾಹಿತ್ಯ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು. ಔರಾದ್ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಎಡಿ ಶಿವಕುಮಾರ ಘಾಟೆ, ಔರಾದ್ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪಿಎಸ್‌ಐ ಸುಕಾನಂದ, ಮಾಜಿ ತಾಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾಪಂ ಸದಸ್ಯರಾದ ಶೇಷಪ್ಪ, ಅನಿಲ ಹೇಡೆ, ಶಿರಸ್ತೇದಾರ್ ಶಿವಲಿಂಗ್, ಜಾನಪದ ಪರಿಷತ್ ಸದಸ್ಯೆ ಸಂಗೀತಾ ಕಾಂಬಳೆ ಇತರರಿದ್ದರು.
ಪಿಡಿಒ ಮನೋಹರ ಸ್ವಾಗತಿಸಿದರು. ಜಗನ್ನಾಥ ಜೀರ್ಗೆ ವಂದಿಸಿದರು. ಶಿವಶರಣಪ್ಪ ವಲ್ಲೇಪೂರೆ ನಿರೂಪಣೆ ಮಾಡಿದರು.
ಸಾಧಕರ ಸತ್ಕಾರ: ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರ.ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಕಲಬುರಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಕಮಲನಗರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುನೀಲ ಕಸ್ತೂರೆ, ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಕಮಲಮ್ಮ ಅರ್ಜುನ್ ಅವರಿಗೆ ಅಭಿನಂದನಾ ಫಲಕ ನೀಡಿ ವಿಶೇಷವಾಗಿ ಸತ್ಕರಿಸಲಾಯಿತು.
ಕಲಾ ತಂಡಗಳ ಭವ್ಯ ಮೆರವಣಿಗೆ: ರಾಷ್ಟ್ರೀಯ ಜನಪದ ನೃತ್ಯೋತ್ಸವ ನಿಮಿತ್ತ ಕಲಾ ತಂಡಗಳ ಭವ್ಯ ಮೆರವಣಿಗೆ ಠಾಣಾಕುಶನೂರ ಮುಖ್ಯ ರಸ್ತೆಯಲ್ಲಿ ನಡೆಯಿತು. ಮೆರವಣಿಗೆಯೂದ್ದಕ್ಕೂ ಕಲಾವಿದರು ಕಲಾ ತಂಡಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಮುಂಬಯಿ, ಪಂಜಾಬ್, ಹೈದರಾಬಾದ್, ಉಸ್ಮಾನಬಾದ್ ಸೇರಿ ೧೦ಕ್ಕೂ ಅಧಿಕ ಕಲಾತಂಡಗಳು ಪಾಲ್ಗೊಂಡಿದ್ದವು.
ಕಣ್ಮನ ಸೆಳೆದ ಜನಪದ ನೃತ್ಯೋತ್ಸವ: ರಾಷ್ಟ್ರೀಯ ಜನಪದ ನೃತ್ಯೋತ್ಸವ ನೃತ್ಯ ರೂಪಕಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿದ್ದವು. ಮಹಾರಾಷ್ಟ್ರದ ಮುಂಬಯಿ ಸುರಬಿ ಮನಸಾಲೆ ತಂಡದಿಂದ ಲಾವಣಿನೃತ್ಯ, ಪಂಜಾಬ್ ಹರಮನ್ ಪ್ರೀತಸಿಂಗ್ ಕಲಾತಂಡದಿಂದ ಭಾಂಗಡಾ ನೃತ್ಯ, ಹೈದರಾಬಾದ್ ಭಾಷೆ ಮತ್ತು ಸಂಸ್ಕೃತಿ ಇಲಾಖೆ ತಂಡದಿಂದ ಒಗ್ಗು ಡೋಲು ನೃತ್ಯ, ಬೋನಾಲು ಕೋಲಾಟಂ, ಉಸ್ಮಾನಬಾದ್ ಕೃಷ್ಣ ಮಹಾವಿದ್ಯಾಲಯ ಕಲಾ ತಂಡದಿಂದ ಬಂಜಾರ ನೃತ್ಯ, ಧನಗಿರಿ ನೃತ್ಯ, ಹೋಳಸಮುದ್ರ ಅಕ್ಕಮಹಾದೇವಿ ಕೋಲಾಟ ಸಂಘ ಕೋಲಾಟ, ಮುಧೋಳ ಕಾಶಿವಿಶ್ವನಾಥ ಕೋಲಾಟ ಸಂಘದಿಂದ ಕೋಲಾಟ, ಠಾಣಾಕುಶನೂರ ಆರತಿ-ಭಾರತಿ ಕೋಲಾಟ ಸಂಘದಿಂದ ಕೋಲಾಟ, ಬೆಳಕೋಣಿ (ಚೌ) ಮಲ್ಲಿಕಾರ್ಜುನ ಭಜನಾ ಸಂಘದಿಂದ ಚಕ್ರಿ ಭಜನೆ ಕಾರ್ಯಕ್ರಮ ನಡೆದರುವು.