

ಕಲಬುರಗಿ: ಬದುಕು ಭಗವಂತ ನೀಡಿದ ಅಮೂಲ್ಯ ಕೊಡುಗೆ. ಹಣ ಗಳಿಕೆಯೊಂದೇ ಮನುಷ್ಯನ ಗುರಿಯಲ್ಲ. ಅದರೊಂದಿಗೆ ಒಂದಿಷ್ಟು ಶಿವಜ್ಞಾನ ಸಂಪಾದಿಸಬೇಕು. ಬದುಕಿನ ಬದಲಾವಣೆಗೆ ಗುರಿ ಮತ್ತು ಸಾಧನೆ ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಆದರ್ಶ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರಾವಣ ಪುರಾಣ ಮಂಗಲೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಜನಜಾಗೃತಿ, ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮುಕ್ತ ಮಾತು, ಗೊಂದಲವಿಲ್ಲದ ನಡೆ ಸುಖ-ಶಾಂತಿಗೆ ಮೂಲವಾದರೆ, ಕೊಂಕು ನುಡಿ, ಇನ್ನೊಬ್ಬರ ಅವಹೇಳನ ಕಷ್ಟಗಳಿಗೆ ಕಾರಣವಾಗುತ್ತದೆ. ಅಕ್ಷರ ಕಲಿತ ಮನುಷ್ಯ ಭ್ರಷ್ಟನಾದರೂ ಆಗಬಹುದು. ಆದರೆ ಸಂಸ್ಕಾರ ಕಲಿತವ ಯಾವತ್ತೂ ಭ್ರಷ್ಟನಾಗಲಾರ. ಮನುಷ್ಯ ಹಣ ಗಳಿಸಬಹುದು. ಆದರೆ ಮಾತಿನಿಂದ ಕಳೆದುಕೊಂಡ ಸಂಬAಧ ತಿರುಗಿ ಪಡೆಯಲು ಸಾಧ್ಯವಿಲ್ಲ ಎಂದರು.
ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ರೋಜಾ ಹಿರೇಮಠದ ಶ್ರೀ ಕೆಂಚಬಸವೇಶ್ವರ ಶಿವಾಚಾರ್ಯರು, ತೊನಸನಹಳ್ಳಿ ಚರಂತೇಶ್ವರಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ದಂಡಗುಂಡ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಕೆಂಭಾವಿ ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಶಿವಶರಣಪ್ಪ ಸೀರಿ, ಮಲ್ಲಿಕಾರ್ಜುನ ಮುದಗಾ, ರಾಚಯ್ಯ ಸ್ವಾಮಿ ಮಠಪತಿ, ಅಮೃತಸ್ವಾಮಿ ಮಠಪತಿ, ವಿರೂಪಾಪುರದ ಮಲ್ಲಿಕಾರ್ಜುನ ಸ್ವಾಮಿ, ಶಿವಕುಮಾರ ಬೋಸಗಾ, ವಾಸುಸ್ವಾಮಿ ಇತರರು ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ನೆಗಳೂರು ಹಿರೇಮಠದ ಗದಿಗೆಯ್ಯ ಶಾಸ್ತಿç ಸ್ವಾಗತಿಸಿ ನಿರೂಪಣೆ ಮಾಡಿದರು. ಸೋಮಯ್ಯ ಹಿರೇಮಠ, ನಾಗರಾಜ ಕೋಟನೂರ ಗವಾಯಿಗಳಿಂದ ಭಕ್ತಿಗೀತೆ ಜರುಗಿತು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಮೊಳಗಿದವು. ಇದಕ್ಕೂ ಮುನ್ನ ಎಂ.ಬಿ.ನಗರದ ಬಸವೇಶ್ವರ ದೇವಸ್ಥಾನದಿಂದ ವೀರಶೈವ ಕಲ್ಯಾಣ ಮಂಟಪವರೆಗೆ ಅಲಂಕೃತ ಸಾರೋಟದಲ್ಲಿ ಮೆರವಣಿಗೆ ಮೂಲಕ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಯಿತು.
ಗಿರಿಯಪ್ಪ ಮುತ್ಯಾ ಅವರಿಗೆ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ಶ್ರಾವಣ ಪರ್ಯಂತ ನಡೆಸಿದ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪುರಾಣ ಪ್ರವಚನಕ್ಕೆ ಅಬ್ಬೆತುಮಕೂರಿನ ತೋಟಯ್ಯ ಶಾಸ್ತಿç ಮಂಗಲ ಹಾಡಿದರು.