ಬದುಕಿರುವವರೆಗೂ ಬಿಜೆಪಿ ಬಿಡಲಾರೆ

Sharanu Salagar
????????????????????????????????????
Published on

ಬೀದರ್: ಈಶ್ವರ ಖಂಡ್ರೆ ಕಾಂಗ್ರೆಸ್ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವ ಎನ್ನುವುದಕ್ಕಿಂತಲೂ ವೀರಶೈವ-ಲಿಂಗಾಯತ ಸಮಾಜದ ಹಿರಿಯ ಮುಖಂಡರು. ಈ ಗೌರವ ಭಾವದಿಂದ ನಾನು ಅವರ ಪಾದಮುಟ್ಟಿ ನಮಸ್ಕರಿಸಿದ್ದು ನಿಜ. ಆದರೆ ಇದನ್ನೇ ಮುಂದಿಟ್ಟುಕೊಂಡು ಕೆಲ ಮಾಧ್ಯಮಗಳಲ್ಲಿ ನಾನು ಕಾಂಗ್ರೆಸ್ ಸೇರಬಹುದಾ ಎನ್ನುವಂತೆ ಬಿಂಬಿಸಿ ವರದಿ ಮಾಡಿರುವುದು ಕಪೋಲಕಲ್ಪಿತ ಎಂದು ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ.
ನೂತನ ಅನುಭವ ಮಂಟಪ ಕಾಮಗಾರಿ ವೀಕ್ಷಣೆ ಹಾಗೂ ಪ್ರಗತಿ ಪರಿಶೀಲನೆ ಸಭೆಗಾಗಿ ಖಂಡ್ರೆ ಅವರು ಆಗಮಿಸಿದ್ದರು. ಇಲ್ಲಿಗೆ ಬರುವ ಒಂದು ದಿನ ಮುಂಚೆಯೇ ನನೆಗೆ ಕರೆ ಮಾಡಿ ಇರುವಂತೆ ತಿಳಿಸಿದ್ದರು. ಅನುಭವ ಮಂಟಪದ ಪವಿತ್ರ ನೆಲದಲ್ಲಿ ಬಸವಣ್ಣನವರು ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಸಂದೇಶ ಸಾರಿದ್ದರು. ಇಂಥ ಪವಿತ್ರ ನೆಲದ ಶಾಸಕನಾದ ನಾನು ಎಲ್ಲರಿಗಿಂತ ಚಿಕ್ಕವನೆಂಬ ಭಾವ ಹೊಂದಿ ಸೇವೆ ಸಲ್ಲಿಸುತ್ತಿದ್ದೇನೆ. ಹೀಗಾಗಿ ಖಂಡ್ರೆ ಅವರಿಗೆ ಕಾಲಿಗೆ ಮುಟ್ಟಿ ನಮಸ್ಕರಿಸಿರುವುದಕ್ಕೆ ತಪ್ಪು ಕಲ್ಪನೆ ಬೇಡ. ಇದು ಹೊಂದಾಣಿಕೆ ರಾಜಕಾರಣ ಅಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಂಡ್ರೆ ಅವರ ಪಾದಮುಟ್ಟಿ ನಮಸ್ಕರಿಸಿರುವುದಕ್ಕೆ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಏನೇನೋ ಮಾತನಾಡುತ್ತಿರುವುದು, ಚರ್ಚೆ ಮಾಡುವುದು ಸರಿಯಲ್ಲ. ಇಲ್ಲಿ ಪಕ್ಷದ ವಿಷಯವೇ ಬರುವುದಿಲ್ಲ. ನಾನು ಬಿಜೆಪಿ ನಿಷ್ಠ ಕಾರ್ಯಕರ್ತ. ಕೊನೆಯುಸಿರು ಇರುವವರೆಗೂ ಬಿಜೆಪಿಯಲ್ಲೇ ಇರುವೆ. ಮಾಧ್ಯಮಗಳ ವರದಿ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.
ನಾನು ಬಡ ರೈತನ ಮಗ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದಲೇ ಎರಡು ಬಾರಿ ಬಸವಕಲ್ಯಾಣ ಶಾಸಕನಾಗಿರುವೆ. ಬಿಜೆಪಿ ಋಣ ತೀರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಬದುಕಿರುವವರೆಗೂ ಇಲ್ಲೇ ಇದ್ದು ಪಕ್ಷದ ಸೇವೆ, ಸಮಾಜದ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ನನ್ನ ಏಳಿಗೆಯನ್ನು ಸಹಿಸದ ಕೆಲವರು ಸುಳ್ಳು ಸುದ್ದಿ ಹಬ್ಬಿಸುವಲ್ಲಿ ತೊಡಗಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ನಿಮಿತ್ತ ನಾರಾಯಣಖೇಡ ಕ್ಷೇತ್ರದ ಉಸ್ತುವಾರಿ ನನಗೆ ನೀಡಿದ್ದರಿಂದ ನಾನು ಅಲ್ಲಿರುವೆ. ಕಲ್ಯಾಣಕ್ಕೆ ಬಂದು ಪಕ್ಷದ ಕಾರ್ಯಕರ್ತರ ಸಭೆ ನಡೆಸುವೆ. ಕಾರ್ಯಕರ್ತರ್ಯಾರೂ ಇಂಥ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net