ಬದುಕಿನಲ್ಲಿ ಸೃಜನಶೀಲತೆ ಮುಖ್ಯ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಜರುಗಿತು.
ಸಮಾರಂಭದಲ್ಲಿ 2021 ಹಾಗೂ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಯನ್ನು ಬಾನು ಮುಷ್ತಾಕ (2021), ಮಧುರಾ ಕರ್ಣಮ್ (2022) ಹಾಗೂ ಲತಾ ರಾಜಶೇಖರ ಕಾವ್ಯ ಪ್ರಶಸ್ತಿಯನ್ನು ಸವಿತಾ ನಾಗಭೂಷಣ (2021), ಡಾ. ವಿನಯಾ ಒಕ್ಕುಂದ (2022) ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳು ತಲಾ 10 ಸಾವಿರ ನಗದು, ಸ್ಮರಣಿಕೆೆ ಹೊಂದಿವೆ. ಕೋಮಲಾದೇವಿ ಸೂಲಿಬೆಲೆ ಸಾಹಿತ್ಯ ಸರಸ್ವತಿ ಪಶಸ್ತಿಯನ್ನು ಜಯಾ ರಾಜಶೇಖರ (2021), ಶಾಂತಲಾ ಯಡ್ರಾವಿ (2022) ಅವರಿಗೆ
ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 5 ಸಾವಿರ ರೂ. ನಗದು, ಸ್ಮರಣಿಕೆ ಹೊಂದಿದೆ.
ಮರಾಠಿ ಲೇಖಕಿ ಡಾ.ಮಾಧುರಿ ಶಾನಭಾಗ ಮಾತನಾಡಿ, ಬದುಕಿನಲ್ಲಿ ಸೃಜನಶೀಲತೆ ಮುಖ್ಯ. ಅದು ಬದುಕಿನಲ್ಲಿ ಇರಲೇಬೇಕು. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸೃಜನಶೀಲತೆಗೆ ಒತ್ತು ಕೊಟ್ಟು, ಸಾಹಿತ್ಯದಲ್ಲಿ ತೊಡಗಬೇಕು ಎಂದರು.
ಮಹಿಳೆಯರಲ್ಲಿ ಹಂಚಿಕೊಳ್ಳಲಾರದ ಸಾಕಷ್ಟು ವ್ಯಥೆ, ನೂರೆಂಟು ಕಥೆಗಳಿವೆ. ಮಹಿಳೆಯರ ಜೀವನ ಕಥನವಾಗಿದ್ದು, ಹೀಗಾಗಿ ಈ ಕಥೆಗಳನ್ನು ಅಭಿವ್ಯಕ್ತಿಗೊಳಿಸಬೇಕು. ಹಿಂದಿನಿಂದಲೂ ಮಹಿಳೆಯರ ಮೇಲಿನ ಶೋಷಣೆ ಸ್ವರೂಪ ಬದಲಾಗುತ್ತಾ ಸಾಗಿದೆ ಹೊರತು ನಿಂತಿಲ್ಲ. ಹೀಗಾಗಿ ಮಹಿಳೆಯರು ದೈನಂದಿನ ಮಾನಸಿಕ ಸಮಸ್ಯೆಗಳಿಂದ ಹೊರ ಬರಬೇಕು ಎಂದರು.
ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ವೀಣಾ ಶಾಂತೇಶ್ವರ, ಡಾ. ಶಾಂತಾ ಇಮ್ರಾಪುರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಹೇಮಾ ಪಟ್ಟಣಶೆಟ್ಟಿ, ಪ್ರೇಮಾ ನಡುವಿನಮನಿ, ಡಾ. ಪ್ರಜ್ಞಾ ಮತ್ತಿಹಳ್ಳಿ, ಡಾ. ಉಷಾ ಗದ್ದಿನಮಠ, ಸುನೀತಾ ಮೂರಶಿಳ್ಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net