ಬದುಕಿನಲ್ಲಿ ಸಾಧನೆ ಮುಖ್ಯ

14 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎಂಬುದು ಮುಖ್ಯವಲ್ಲ. ಬದುಕಿನ ಅವಧಿಯಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಮುಖ್ಯ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.
ನಾಟ್ಯ ಭೈರವಿ ಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪುನೀತೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿ ತನ್ನ ಬದುಕಿನ ಅವಧಿಯಲ್ಲಿ ತಾನೂ ಬದುಕಿ ತನ್ನೊಡನೆ ಇನ್ನೊಬ್ಬರನ್ನೂ ಬದುಕಿಸಿದಾಗಲೇ ಅವನ ಜೀವನ ಸಾರ್ಥಕ. ಸಮಾಜದಲ್ಲಿ ನಿಸ್ವಾರ್ಥವಾಗಿ ಬದುಕಿದವರು ಸತ್ತ ಮೇಲೆ ಸಹ ಸಮಾಜ ಅವರನ್ನು ಬದುಕಿಸುತ್ತದೆ. ಇದಕ್ಕೆ ಪುನೀತ ರಾಜಕುಮಾರ ಬದುಕೇ ಉದಾಹರಣೆ. ಗಳಿಸಿದ್ದರಲ್ಲಿ ಅಲ್ಪವಾದರೂ ಸಮಾಜಕ್ಕೆ ಅರ್ಪಿಸಿ ಪುಣ್ಯ ಫಲ ಪಡೆಯಬೇಕು ಎಂದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಮಾತನಾಡಿ, ಕಲೆ, ಸಂಸ್ಕೃತಿಯಲ್ಲಿ ನಮ್ಮ ನಾಡಿನ ಕಲಾವಿದರು ಪ್ರಸಿದ್ಧಿ ಪಡೆದಿದ್ದಾರೆ. ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ನೀಡಬೇಕು. ಮನುಷ್ಯನ ವಿಕಾರ ಮನಸ್ಸಿಗೆ ಕಲೆಯೇ ಮದ್ದು. ಹುಟ್ಟಿನಿಂದಲೇ ನಮ್ಮಲ್ಲಿ ಅಡಗಿರುವ ಕಲೆಯನ್ನು ಬೆಳೆಸಲು ಶ್ರಮಿಸಬೇಕು ಎಂದರು.
ಅತಿಥಿಗಳಾಗಿ ವಿದುಷಿ ಪ್ರಮೋದಾ ಉಪಾಧ್ಯಾಯ, ಕವಿತಾ ತೇರದಾಳ, ಪ್ರಕಾಶ ಕ್ಷತಿ, ಶಿವಾನಂದ ಅಮರಶೆಟ್ಟಿ ಆಗಮಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ರಘು ಅರವೇಡ ಸ್ವಾಗತಿಸಿದರು. ಜ್ಯೋತಿ ಅರವೇಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ವಂದಿಸಿದರು. ನಂತರ ನೂರಾರು ಕಲಾವಿದರು ತಮ್ಮ ತಂಡಗಳ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net