

ಭಾಲ್ಕಿ: ಮನುಷ್ಯ ಜೀವನದಲ್ಲಿ ಸ್ತುತಿ-ನಿಂದನೆಗಳನ್ನು ಸಮಾನವಾಗಿ ಸ್ವೀಕರಿಸಿ ಸಮಾಧಾನದ ಬದುಕು ಸಾಗಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ ಬುಧವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಮತ್ತು ೩೦೭ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶರಣ ಚಳವಳಿಯಲ್ಲಿ ಪ್ರಮುಖರಾಗಿದ್ದ ಶಿವಯೋಗಿಗಳು ವಚನ ಸಾಹಿತ್ಯ ರಕ್ಷಣೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರು ರಚಿಸಿದ ವಚನಗಳು ಮನುಷ್ಯನ ಸಾರ್ಥಕ್ಯ ಬದುಕಿಗೆ ಪೂರಕವಾಗಿವೆ ಎಂದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಕೊಡುಗೆ ದೊಡ್ಡದಿದೆ ಎಂದು ಸ್ಮರಿಸಿದರು.
ಸಿದ್ಧರಾಮೇಶ್ವರ ಸಮಾಜದ ಅಧ್ಯಕ್ಷ ಮಾಣಿಕರಾವ ವಾಡೇಕರ ಗಡವಂತಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಬಸವಗಿರಿ ಬಸವಸೇವಾ ಪ್ರತಿಷ್ಠಾನದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಅನುಭಾವ ನೀಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್(ಚಿದ್ರಿ) ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಜಕುಮಾರ ಸಿಂಧೆ, ಸಂಜುಕುಮಾರ ಸಿಂಧೆ, ಚನ್ನಬಟ್ಟೆ ಕಲ್ಲಪ್ಪ ಇತರರಿದ್ದರು. ವಿಜಯಲಕ್ಷ್ಮೀ ಸಂಗಮೇಶ ಬಿರಾದಾರ್ ಗ್ರಂಥ ಪಠಣ ಮಾಡಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಣೆ ಮಾಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದ ಸಾಧಕರಿಗೆ ಹಿರೇಮಠ ಸಂಸ್ಥಾನದಿಂದ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಅಪ್ಪಾರಾವ ಸೌದಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ತಳವಾಡೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸೂರ್ಯಕಾಂತ ಬಿರಾದಾರ್, ಅಧ್ಯಕ್ಷ ಸೋಮಶೇಖರ ಬಿರಾದಾರ್(ಚಿದ್ರಿ), ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಪ್ರಧಾನ ಕಾರ್ಯದರ್ಶಿ ರಾಜಪ್ಪ ಪಾಟೀಲ್, ಚನ್ನಬಟ್ಟೆ ಕಲ್ಲಪ್ಪ ಸಿದ್ದಪ್ಪ, ಅರ್ಬನ್ ಬ್ಯಾಂಕ್ ನಿರ್ದೇಶಕ ಅನಿಲ ಲೋಖಂಡೆ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.