

ಬಸವಕಲ್ಯಾಣ: ಬದುಕಿನ ಶ್ರೇಯಸ್ಸಿಗೆ ಅದರ್ಶವೇ ಅಡಿಪಾಯ. ಆದರ್ಶ ಎಂಬುದು ಅಂತರಂಗ ಬಹಿರಂಗಗಳೆರಡೂ ಶುಚಿಗೊಳಿಸುವ ಸಾಧನವಾಗಿದ್ದು, ಪ್ರತಿ ವಿದ್ಯಾರ್ಥಿಯು ಇದನ್ನು ವೃತದ ರೂಪದಲ್ಲಿ ಪಾಲಿಸಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠ ಸಂಚಾಲಿತ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಯಾವ ಸಮಾಜದಲ್ಲಿ ಆದರ್ಶಗಳು ಮಾತನಾಡುತ್ತವೆಯೋ ಅಂತಹ ಸಮಾಜ ಶ್ರೇಷ್ಠ ಮನಸ್ಥಿತಿಯನ್ನು ಹೊಂದಿರುತ್ತದೆ. ಶಿಸ್ತು, ಸಂಯಮ, ಕಠಿಣ ಪರಿಶ್ರಮ, ಸತ್ಯನಿಷ್ಟ, ಪ್ರಾಮಾಣಿಕತೆ ಬಾಲ್ಯದಿಂದಲೇ ಧಾರಣ ಮಾಡಿದರೆ ಅಂತಹವರ ಬದುಕು ಸಮಾಜಕ್ಕೆ, ರಾಷ್ಟ್ರಕ್ಕೆ ಆದರ್ಶಪ್ರಾಯವಾಗಿರುತ್ತದೆ ಎಂದರು.
ಪರೀಕ್ಷೆಗಳನ್ನು ನಿರ್ಭಯವಾಗಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು. ಧೈರ್ಯ ವಿವೇಕದಿಂದ ಪರೀಕ್ಷೆಯನ್ನು ಎದುರಿಸಿ ಎಲ್ಲರೂ ಉತ್ತಮ ಶ್ರೇಯಾಂಕದೊಂದಿಗೆ ಉತ್ತೀರ್ಣರಾಗುವಂತೆ ಶುಭ ಹಾರೈಸಿದರು.
ಶಿಕ್ಷಕ ಅಂಬಾರಾಯ ಉಗಾಜಿ ಮಾತನಾಡಿದರು. ಮಲ್ಲಿನಾಥ ಹಿರೇಮಠ, ಐ.ಜಿ.ಮಠಪತಿ, ಶರಣು ಬಿರಾದಾರ, ಹೇಮಲತಾ ಹಿರೇಮಠ, ಗಜೇಂದ್ರ ಸಂತಾಜಿ, ಸಂತೋಷ ಟೋಣಪೆ, ಸಿಆರ್‌ಪಿ ಲಕ್ಷ್ಮಣ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಡಾ.ರಾಜಶೇಖರ ಮದರಿ, ಚನ್ನಬಸಯ್ಯ ಮಠ, ಅಲ್ಲಮಪ್ರಭು ಹಿರೇಮಠ, ಸುಧಾರಾಣಿ ಹಾರಕೂಡೆ, ದಿಲೀಪ ಕಲೋಜಿ ಇತರರಿದ್ದರು.
ನವಲಿಂಗ ಪಾಟೀಲ ಸ್ವಾಗತಿಸಿ, ನಿರೂಪಣೆ ಮಾಡಿದರು. ಶಿವಾನಂದ ಪೂಜಾರಿ ವಂದಿಸಿದರು. ರಶ್ಮಿ ಪವಾಡಶೆಟ್ಟಿ ವಚನ ಗಾಯನ ಮಾಡಿದರು.
ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳು ಹಾರಕೂಡ ಶ್ರೀಗಳಿಗೆ ೭೮೪ನೇ ತುಲಾಭಾರ ಮಾಡಿ ೨೧ ತೊಲೆ ಬೆಳ್ಳಿ ಪ್ರಸಾದ ತಾಟು ನೀಡಿ ಆಶೀರ್ವಾದ ಪಡೆದರು.