

ಬಸವಕಲ್ಯಾಣ: ಬದುಕಿನ ವಿಕಾಸಕ್ಕೆ ಅಧ್ಯಾತ್ಮ ಸಾಧನೆ ಬಹಳ ಮುಖ್ಯ. ಭೌತಿಕ ಸಂಪನ್ಮೂಲಗಳ ಜತೆಗೆ ಒಂದಿಷ್ಟಾದರೂ ಅಧ್ಯಾತ್ಮ ಜ್ಞಾನ ಅರಿಯದಿದ್ದರೆ ಮಾನವನ ಬಾಳು ನಿರರ್ಥಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ರಂಭಾಪುರಿ ಜಗದ್ಗುರುಗಳ ೩೪ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ೬ನೇ ದಿನವಾದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮ ಮಾರ್ಗದಲ್ಲಿ ನಡೆದಾಗ ಸಂಪತ್ತು ಪ್ರಾಪ್ತವಾಗುತ್ತದೆ. ಸಂಪತ್ತಿನಿಂದ ಬಯಕೆಗಳು ಪೂರ್ಣಗೊಳ್ಳುತ್ತವೆ. ದೇವರು ಮೊದಲಿಗೆ ಧರ್ಮ, ಕೊನೆಗೆ ಮೋಕ್ಷ ಇಟ್ಟಿದ್ದಾನೆ. ಅರ್ಥ ಮತ್ತು ಕಾಮ ಪ್ರಾಪ್ತಿ ಆಗಬೇಕಾದರೆ ಧರ್ಮ ಮಾರ್ಗ ಅನುಸರಿಸಿದರೆ ಬದುಕು ಉಜ್ವಲಗೊಳ್ಳುತ್ತದೆ ಎಂದರು.
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥ ಬಯಸುವುದು ಸಹಜ. ಮನುಷ್ಯ ಎಷ್ಟು ಬುದ್ಧಿವಂತನೋ ಅವನಿಗಿಂತ ಭಗವಂತ ಬಹುಬುದ್ಧಿ ಮತ್ತು ವಿಚಾರವಂತ. ಮನುಷ್ಯ ಸಂಪತ್ತು ಮತ್ತು ಬಯಕೆ ಅಷ್ಟೇ ಬಯಸುತ್ತಾನೆ. ಇದರ ಪ್ರಾಪ್ತಿಗೆ ಧರ್ಮವೇ ಮೂಲ. ಧರ್ಮವೆಂದರೆ ಆಚರಣೆ ಎಂದರ್ಥ ಎಂದು ಹೇಳಿದರು.
ವೀರಶೈವ ಧರ್ಮ ಮಾನವೀಯ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಎಲ್ಲ ಧರ್ಮಗಳಲ್ಲಿ ಕಾಣುವ ಆದರ್ಶ ಅಂಶಗಳು ವೀರಶೈವದಲ್ಲಿ ಪರಿಪೂರ್ಣಗೊಂಡಿದ್ದನ್ನು ಕಾಣುತ್ತೇವೆ. ಜೈನರ ಅಹಿಂಸೆ, ಕ್ರೈಸ್ತರ ಕರುಣೆ, ಇಸ್ಲಾಂ ನಿಷ್ಠೆ, ಆರ್ಯರ ಜ್ಞಾನ ಮತ್ತು ದ್ರಾವಿಡರ ಭಕ್ತಿ ವೀರಶೈವ ಧರ್ಮದಲ್ಲಿ ಅಡಕಗೊಂಡಿದೆ. ವೀರಶೈವ ಧರ್ಮ ಮಾನವ ಧರ್ಮವೆಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ ಎಂದರು.
ಶ್ರೀ ರಂಭಾಪುರಿ ಪೀಠದ ಮುಖವಾಣಿ ರಂಭಾಪುರಿ ಬೆಳಗು ದಸರಾ ವಿಶೇಷಾಂಕ ಬಿಡುಗಡೆ ಮಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿದರು. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ, ಶಾಸಕರಾದ ಬಿ.ಆರ್. ಪಾಟೀಲ್, ಅಲ್ಲಮಪ್ರಭು ಪಾಟೀಲ್ ಮಾತನಾಡಿದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ, ಶ್ರೀ ರಾಜೇಶ್ವರ ಶಿವಾಚಾರ್ಯ ತಡೋಳಾ, ಭುವನಗಿರಿ ಕವಲೇದುರ್ಗ ಸಂಸ್ಥಾನಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ, ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ, ಮುಗಳನಾಗಾವಿ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ.ಜಿ.ಎಸ್. ಭುರಳೆ, ಸುನೀಲ ಪಾಟೀಲ್, ಸುರೇಶ ಸ್ವಾಮಿ, ಷಹಾಜಿ ಭೋಸ್ಲೆ, ಕಮಲಾಕಾರ ಪಾಟೀಲ್ ಮನ್ನಳ್ಳಿ, ಚಂದ್ರಶೇಖರ ಪಾಟೀಲ್, ಮಾಧವರಾವ ಹಸೂರೆ ಇತರರಿದ್ದರು. ಪುಣ್ಯಕೋಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ನಿರೂಪಣೆ ಮಾಡಿದರು.
ತ್ರಿಪುರಾಂತ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಸಾಧನ ಸಿರಿ ಪ್ರಶಸ್ತಿ ಹಾಗೂ ಚಾಂಬೋಳ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ, ಗುಡಪಳ್ಳಿ ಶ್ರೀ ಚಂದ್ರಶೇಖರ ಶಿವಾಚಾರ್ಯ, ಶ್ರೀ ಬಸವಲಿಂಗ ಸ್ವಾಮೀಜಿ ಲಾಡಮುಗಳಿ, ಶ್ರೀ ಶಿವಲಿಂಗ ಸ್ವಾಮೀಜಿ ಖೇಳಗಿ, ಶ್ರೀ ಉಪಮನ್ಯು ಶಿವಾಚಾರ್ಯ ಐನಾಪುರ, ಶ್ರೀ ಶಿವಶಾಂತಲಿಂಗ ಶಿವಾಚಾರ್ಯ ಕಿಣ್ಣಿಸುಲ್ತಾನ ಅವರಿಗೆ ಗೌರವ ಗುರುರಕ್ಷೆ ನೀಡಿ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಒಗ್ಗಟ್ಟು ಇಲ್ಲದಿದ್ದರೆ ಬಲಹೀನ: ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಬಲಹೀನರಾಗುತ್ತೇವೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು. ಶ್ರೀ ರಂಭಾಪುರಿ ಪೀಠದ ಮುಖವಾಣಿ ರಂಭಾಪುರಿ ಬೆಳಗು ದಸರಾ ವಿಶೇಷಾಂಕ ಬಿಡುಗಡೆ ಮಾಡಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಧರ್ಮದ ಮೂಲಭೂತ ತತ್ವಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವೀರಶೈವ-ಲಿಂಗಾಯತರು ವರ್ಗ ಭೇದ, ವರ್ಣ ಭೇದ ಮಾಡದೆ ಎಲ್ಲರನ್ನು ಅಪ್ಪಿಕೊಂಡು ಬಾಳಬೇಕು ಎಂದರು. ಮೀಸಲಾತಿ ರಾಜಕಾರಣದಿಂದ ಸಮಾಜ ಒಡೆದು ಹೋಗುತ್ತಿದೆ. ಸರ್ಕಾರಗಳು ಮೀಸಲಾತಿ ನೀಡಲು ತನ್ನದೇ ಆದ ಇತಿಮಿತಿಯಿದೆ. ದೇಶದಲ್ಲಿ ಹಲವಾರು ಆಡಳಿತಗಳು ಬಂದುಹೋಗಿವೆ. ಆದರೆ ಧರ್ಮ ಬದಲಾಗಲಿಲ್ಲ. ಯುವಕರಿಗೆ ಹೇಳುವ ಕಿವಿಮಾತೆಂದರೆ ಮೀಸಲಾತಿ ಬೆನ್ನತ್ತಿ ಹೋಗುವುದರಿಂದ ಪ್ರಯೋಜನವಿಲ್ಲ. ಪ್ರಾಮಾಣಿಕ ದುಡಿಮೆಯಿಂದ ಮಾತ್ರ ನಮ್ಮ ಭವಿಷ್ಯವಿದೆ. ಸಮಾಜದ ಅಭಿವೃದ್ಧಿಗಾಗಿ ಬೇರಾರೂ ಸಹಾಯ ಮಾಡುವುದಿಲ್ಲ. ನಮ್ಮ ಗಳಿಕೆಯಲ್ಲಿ ಕೆಲ ಭಾಗವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಡಬೇಕು ಎಂದು ಹೇಳಿದರು.