ಬದುಕಿನ ಭದ್ರತೆಗೆ ಬೇಕು ಆರ್ಥಿಕ ಪ್ರಜ್ಞೆ

27BK4
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಗುರುವಾರ ಏರ್ಪಡಿಸಿದ್ದ ವೈಯಕ್ತಿಕ ಹಣಕಾಸಿನ ನಿರ್ವಹಣೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಅಧಿಕಾರಿ ಬಿ.ವಿ.ಶ್ರೀನಿವಾಸ ಉದ್ಘಾಟಿಸಿದರು. ಡಾ.ಮಲ್ಲಿಕಾರ್ಜುನ ಲಕಶೆಟ್ಟಿ, ಡಾ.ಭೀಮಾಶಂಕರ ಬಿರಾದಾರ, ವಿರುಪಾಕ್ಷ ಇತರರಿದ್ದರು.
Published on

ಬಸವಕಲ್ಯಾಣ: ಯಾವುದೇ ಮೂಲದಿಂದ ವರಮಾನ ಬಂದರೂ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂಬ ಜ್ಞಾನ ಮುಖ್ಯ ಎಂದು ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಚೇರಿ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಗುರುವಾರ ಏರ್ಪಡಿಸಿದ್ದ ವೈಯಕ್ತಿಕ ಹಣಕಾಸಿನ ನಿರ್ವಹಣೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಉಳಿತಾಯ ಮತ್ತು ಹೂಡಿಕೆಗಳಲ್ಲಿ ಹೆಚ್ಚು ವ್ಯತ್ಯಾಸವಾದರೆ ಆರ್ಥಿಕ ಅಪಾಯ ಎದುರಾಗುತ್ತದೆ. ನಮಗೆ ನಾವೇ ಅರ್ಥೈಸಿಕೊಂಡು ಮಾಡುವ ಪರ್ಸನಲ್ ಫೈನಾನ್ಸ್ ಜೀವನದ ಪ್ರಧಾನ ಅಂಶವಾಗಿದೆ. ಹೂಡಿಕೆ ಪ್ರಜ್ಞೆಯಿಂದಲೂ ವೈಯಕ್ತಿಕ ಆರ್ಥಿಕತೆ ಸುಧಾರಣೆ ಸಾಧ್ಯ ಎಂದರು.

ಬೆಂಗಳೂರಿನ ಎಜಿ ಕಚೇರಿ ಇನ್ನೊಬ್ಬ ನಿವೃತ್ತ ಅಧಿಕಾರಿ ವಿರುಪಾಕ್ಷ ಮಾತನಾಡಿ, ಪರ್ಸನಲ್ ಫೈನಾನ್ಸ್ ಹೊರದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಓದುತ್ತಾರೆ. ಹಣ ಉಳಿತಾಯಕ್ಕೆ ಹಲವು ದಾರಿಗಳಿವೆ. ಆರ್ಥಿಕ ಮೌಲ್ಯದ ಬಗ್ಗೆ ಒತ್ತು ನೀಡುವ ಮೂಲಕ ವೈಯಕ್ತಿಕ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚು ಸೇರಬೇಕಾಗಿದೆ. ಭಾರತೀಯ ಸ್ವಾಯತ್ತ ಸಂಸ್ಥೆಯಲ್ಲಿ ಹಲವು ಹುದ್ದೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಗಳಿಕೆ ಎಷ್ಟು ಮುಖ್ಯವೋ ಉಳಿತಾಯವೂ ಅಷ್ಟೆ ಮುಖ್ಯ. ವಿದ್ಯಾರ್ಥಿಗಳು ಅನವಶ್ಯಕ ಖರ್ಚು ಮಾಡದೆ ಪಾಲಕರು ನೀಡಿದ ಹಣದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಆರ್ಥಿಕ ಪ್ರಜ್ಞೆ ಎಂಬುದು ವ್ಯವಹಾರ ಮತ್ತು ಲೋಕಜ್ಞಾನ. ಪ್ರತಿಯೊಬ್ಬರ ಕೆಲಸಕ್ಕೂ ಒಂದು ಮೌಲ್ಯವಿರುತ್ತದೆ. ಕೃಷಿಕರು, ಜನಪರ, ಮನುಷ್ಯತ್ವದ ಪರವಾದ ಆರ್ಥಿಕ ನೀತಿಗಳು ಜನರ ಬದುಕು ಸುಧಾರಿಸುತ್ತವೆ ಎಂದು ಹೇಳಿದರು.

ಮೈಸೂರಿನ ಶ್ರೀಶೈಲ್, ಪ್ರಮುಖರಾದ ರೋಶನ್ ಬಿ., ವಿವೇಕಾನಂದ ಶಿಂಧೆ, ಚನ್ನಬಸಪ್ಪ ಗೌರ, ಜಗದೇವಿ ಜವಳಗೆ, ಡಾ.ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪುರೆ, ಗುರುದೇವಿ ಕಿಚಡೆ, ಸಚಿನ್ ಬಿಡವೆ, ಪ್ರಶಾಂತ ಬುಡಗೆ ಉಪಸ್ಥಿತರಿದ್ದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಡಾ.ಶಾಂತಲಾ ಪಾಟೀಲ್ ವಂದಿಸಿದರು. ಸಂಗೀತಾ ಮಹಾಗಾಂವೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net