ಬದುಕಿನ ಪಾಠ ಕಲಿಸಿದ ಪ್ರೊ.ಬಿ. ಕೃಷ್ಣಪ್ಪ

BPT
Published on

ಚಿತ್ರದುರ್ಗ: ಶೋಷಿತರಿಗೆ ಸ್ವಾಭಿಮಾನದ ಬದುಕಿನ ಪಾಠ ಹೇಳಿಕೊಟ್ಟ ಮಹನೀಯ ಪ್ರೊ.ಬಿ. ಕೃಷ್ಣಪ್ಪ ಎಂದು ಚಿತ್ರದುರ್ಗ ಬೆಸ್ಕಾಂ ಮುಖ್ಯ ಇಂಜಿನಿಯರ್ ರೋಮರಾಜ್ ಹೇಳಿದರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕೃಷ್ಣಪ್ಪ ಮತ್ತು ದಲಿತರ ಸ್ವಾವಲಂಬಿ ಬದುಕು ಎಂಬ ವಿಚಾರ ಕುರಿತು ಮಾತನಾಡಿದರು.

ಕರ್ನಾಟಕಕ್ಕೆ ಅಂಬೇಡ್ಕರ್ ಮತ್ತು ದಲಿತ ಚಳವಳಿಯನ್ನು ಪರಿಚಯಿಸಿದ ಪ್ರೊ.ಬಿ. ಕೃಷ್ಣಪ್ಪ ಈ ಜಿಲ್ಲೆಯವರು ಎಂಬುದೇ ಹೆಮ್ಮೆಯ ವಿಷಯ ಎಂದರು.

ದಲಿತರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ. ಆದರೆ, ಅದು ಆರದಂತೆ ನೋಡಿಕೊಳ್ಳಿ ಎಂಬ ಸಲಹೆ ನೀಡಿದ್ದರು. ಪ್ರಸ್ತುತ ಪದವಿ ಗಳಿಸಿದ ವಿದ್ಯಾವಂತರಿಗಿಂತ ವೈಚಾರಿಕ ಅಧ್ಯಯನ ಮಾಡಿದವರಿಂದ ದಲಿತರ ಒಗ್ಗಟ್ಟಿನ ಕಾರ್ಯ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಸಾಮಾಜಿಕ ಚಳವಳಿಗಿಂತಲೂ ಮುಖ್ಯವಾಗಿ ಆರ್ಥಿಕ ಮತ್ತು ಶೈಕ್ಷಣಿಕ ಚಳವಳಿಗಳ ಅಗತ್ಯವಿದೆ. ಆದರೆ, ಈಗಿನ ಯುವಸಮೂಹ ಅಂಬೇಡ್ಕರ್ ಕುರಿತು ಅಧ್ಯಯನ ಮಾಡದಿರುವ ಕಾರಣ ಅದು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.

ಉಪನ್ಯಾಸಕ ಈ. ನಾಗೇಂದ್ರಪ್ಪ, ಬಿಎಸ್‌ಐ ಜಿಲ್ಲಾ ಕಾರ್ಯದರ್ಶಿ ಶಕುಂತಲಾ, ಸಚಿನ್ ಗೌತಮ್, ತಿಪಟೂರು ಮಂಜು, ಬನ್ನಿಕೋಡ್ ರಮೇಶ್, ಶಿಕ್ಷಕಿ ಗಿರಿಜಾ, ಶಾಂತಮ್ಮ, ನಾಗೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net