ಬದುಕಿನ ಪರಿವರ್ತನೆಗೆ ಶಿಕ್ಷಣ ಸಹಕಾರಿ

23Manju2-Web
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮವನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ ಉದ್ಘಾಟಿಸಿದರು. ಶಾಸಕರಾದ ಅಭಯ ಪಾಟೀಲ, ಗಣೇಶ ಹುಕ್ಕೇರಿ, ಮಾಜಿ ಶಾಸಕ ಸಂಜಯ ಪಾಟೀಲ, ವಿನೋದ ದೊಡ್ಡಣ್ಣವರ ಇದ್ದರು.
Published on

ಬೆಳಗಾವಿ: ಮನೆಯಲ್ಲಿ ತಾಯಿಯಿಂದ ಆರಂಭವಾದ ಮಗುವಿನ ಶಿಕ್ಷಣ ಶಾಲೆಯಲ್ಲಿ ಪರಿಪೂರ್ಣವಾಗುತ್ತದೆ. ಅಜ್ಞಾನದ ಹಸಿವು ಹೋಗಲಾಡಿಸಿ, ಮಾನವನಲ್ಲಿ ಶಿಸ್ತು, ಪರಿವರ್ತನೆ ತರುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ತಾಲೂಕಿನ ಹಲಗಾ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಅದು ಹೊರಬರಲು ಅವಕಾಶ ಕಲ್ಪಿಸಬೇಕು. ಶಾಂತಿ ಸ್ಥಾಪನೆ ಜತೆಗೆ ದೇಶ ಕಟ್ಟುವ ಕಾರ್ಯವಾಗಬೇಕು. ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ ಎಂದರು.

ಡಾ.ಜಿನದತ್ತ ದೇಸಾಯಿ ಮಾತನಾಡಿ ಕವಿ, ಯಶಸ್ವಿ ರಾಜಕಾರಣಿಯಾಗಿ ಮೊಯ್ಲಿ ಅವರು ಮಾಡಿದ ಸಾಧನೆ ಪ್ರಶಂಸಾರ್ಹ. ಭರತೇಶ ಸಂಸ್ಥೆಯ ಶೈಕ್ಷಣಿಕ-ಸಾಮಾಜಿಕ ಕೊಡುಗೆ ಮಹತ್ತರವಾದದ್ದು ಎಂದರು.

ಸಂಸ್ಥೆಯ ನಿರ್ದೇಶಕ ವಿನೋದ ದೊಡ್ಡಣ್ಣವರ ಮಾತನಾಡಿ, ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಎರಡು ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಹಾಗೂ ಪ್ರತಿವರ್ಷ ಬೆಳಗಾವಿ ಪರಿಸರದಲ್ಲಿ ಸಮಾಜಸೇವೆ-ಶಿಕ್ಷಣ-ಕಲೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ವ್ಯಕ್ತಿಯೊಬ್ಬರನ್ನು ಪ್ರಶಸ್ತಿ ನೀಡಿ ಗೌರವಿಸುವ ಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದರು.

ಹಲಗಾ ಭರತೇಶ ಸೆಂಟ್ರಲ್ ಸ್ಕೂಲ್‌ಗೆ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಪ್ರಸಿದ್ಧ ಕವಿ ಹಾಗೂ ಜಿಲ್ಲಾ ನಿವೃತ್ತ ನ್ಯಾಯಾಧೀಶ ಡಾ ಜಿನದತ್ತ ದೇಸಾಯಿ ಇವರ ಪತ್ನಿ ದಿ.ಸರೋಜಿನಿ ಜಿನದತ್ತ ದೇಸಾಯಿ ಇವರ ಸ್ಮರಣಾರ್ಥ ನಾಮಕರಣ ಮಾಡಲಾಯಿತು.

ಶಾಸಕರಾದ ಅಭಯ ಪಾಟೀಲ, ಗಣೇಶ ಹುಕ್ಕೇರಿ, ಮಾಜಿ ಶಾಸಕ ಸಂಜಯ ಪಾಟೀಲ, ಉದಯ ಚೌಗುಲೆ, ಮಧುಕೇಶ ಬಿಳಗೋಜಿ, ಮಾರುತಿ ಪುನಾಜಿ, ಶ್ರೀಪಾಲ ಖೇಮಲಾಪುರೆ, ಅಧ್ಯಕ್ಷ ಗೋಪಾಲ ಜಿನಗೌಡ, ಭೂಷಣ ಮಿರ್ಜಿ, ಪುಷ್ಪದಂತ ದೊಡ್ಡಣ್ಣವರ, ಸನತಕುಮಾರ ಚೌಗುಲೆ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net