

ಚಿಕ್ಕಮಗಳೂರು: ಪರಿಸರ ಮತ್ತು ಸಾಹಿತ್ಯದ ನಡುವಿನ ಸಾಕ್ಷಿಪ್ರಜ್ಞೆಯಾಗಿ ತೇಜಸ್ವಿಯವರು ಬದುಕಿನ ನೈಜತೆಗಳನ್ನು ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಬಿಜಿಎಸ್ ಪಿಯು ಕಾಲೇಜಿನಲ್ಲಿ ಜಿಲ್ಲಾ, ತಾಲೂಕು ಮತ್ತು ನಗರ ಕಸಾಪ ಘಟಕದಿಂದ ಆಯೋಜಿಸಿದ್ಧ ಪೂರ್ಣಚಂದ್ರ ತೇಜಸ್ವಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಮತ್ತು ತೇಜಸ್ವಿಯವರ ಸಾಹಿತ್ಯದ ವಸ್ತು ಪರಿಸರವೇ ಆಗಿದ್ದರೂ, ಕುವೆಂಪು ಅವರು ಸಾಹಿತ್ಯದಲ್ಲಿ ಚಿತ್ರಿಸಿದ್ದ ಕಾಡಿನ ವಿಶೇಷತೆಗಳಿವೆ. ಒಂದೇ ತಲೆಮಾರಿನ ಅಂತರದಲ್ಲಿ ಕಣ್ಮರೆಯಾಗಿ ತೇಜಸ್ವಿಯವರು ಕಾಡಿನಲ್ಲಾದ ಮಹಾ ಬದಲಾವಣೆಗಳನ್ನು ಮತ್ತು ಮನುಷ್ಯ ಸಂಬAಧಗಳ ಬಗ್ಗೆ ಚಿತ್ರಿಸಿದ್ದಾರೆ ಎಂದರು.
ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು, ನಾಡು-ನುಡಿ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಮೇರು ಸಾಹಿತಿ ಎಂದು ಬಣ್ಣಿಸಿದರು.
ಉಪನ್ಯಾಸ ನೀಡಿ ಮಾತನಾಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ, ತೇಜಸ್ವಿ ಅವರು ತಮ್ಮ ಬರಹದ ಮೂಲಕ ಸಾಮಾಜಿಕತೆಯಿಂದ ತಾತ್ವಿಕತೆ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲೇ ಮಕ್ಕಳಿಗೆ ತೇಜಸ್ವಿಯವರ ಸಾಹಿತ್ಯವನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಸ್ನಾತಕೋತ್ತರ ಪದವಿಯ ನಂತರ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜೊತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಛಾಯಾಚಿತ್ರಗ್ರಹಣ ಆಸಕ್ತಿಯಿದ್ದ ತೇಜಸ್ವಿ ಅವರು ರೈತ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ತೇಜಸ್ವಿಯವರು, ಕಥೆ, ಕಾದಂಬರಿ ಹಾಗೂ ಪುಸ್ತಕಗಳನ್ನು ರಚಿಸಿಕೊಂಡು ಪೂರ್ಣಚಂದ್ರರಾಗಿ ಬೆಳಗಿದವರು. ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಎಸ್ ಪಿಯು ಕಾಲೇಜು ಪ್ರಾಚಾರ್ಯ ಜೆ.ಜಿ.ಸುರೇಂದ್ರ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷಿö್ಮÃ, ನಗರಾಧ್ಯಕ್ಷ ಸಚಿನ್‌ಸಿಂಗ್ ಮತ್ತಿತರರಿದ್ದರು.