

ಬಸವಕಲ್ಯಾಣ: ಪಾರದರ್ಶಕತೆ, ಭಾವನೆಗಳ ವ್ಯವಧಾನ ಕಣವಿ ಕಾವ್ಯದ ಲಯವಾಗಿತ್ತು. ಶಾಂತಭಾವದ ಅಭಿವ್ಯಕ್ತಿ ಮಾಧ್ಯಮ ಅವರ ಕಾವ್ಯದ ತಿರುಳು ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹೇಳಿದರು.
ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಚೆನ್ನವೀರ ಕಣವಿ ಸಾಹಿತ್ಯ ಆಯಾಮಗಳು ಕುರಿತು ಆಯೋಜಿಸಿದ್ದ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದ ಅವರು, ಕಾವ್ಯಾಕ್ಷಿಯಿಂದ ರಕ್ತಾಕ್ಷಿ ವರೆಗಿನ ಕಣವಿ ಅವರ ಕಾವ್ಯ ಪ್ರಯಾಣ ಕನ್ನಡ ಮನಸುಗಳಲ್ಲಿ ಸೂಕ್ಷ್ಮತೆ ಬೆಳೆಸಿದೆ. ಬದುಕಿನ ಜಿಜ್ಞಾಸೆಯೇ ಕಣವಿ ಕಾವ್ಯ ತತ್ವ ಎಂದು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯದ ನಾಲ್ಕೂ ಘಟ್ಟಗಳನ್ನು ಸ್ವೀಕರಿಸಿಯೂ ಅದನ್ನು ದಾಟಿ ಬಂದ ಕವಿ ಕಣವಿ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯದಿಂದ ಎಷ್ಟು ಸ್ವೀಕರಿಸಿದರೋ ಅಷ್ಟೇ ಅಂತರವನ್ನೂ ಕಾಯ್ದುಕೊಂಡಿದ್ದರು. ಶರಣ ಚಳವಳಿ, ಅಲ್ಲಮ, ಬಸವಣ್ಣ, ಸಾಂಗತ್ಯ, ಜನಪದ ಹಾಡುಗಳ ಗಾಢ ತಿಳಿವಳಿಕೆಯಿಂದ ಕಾವ್ಯ ಕಟ್ಟಿದ್ದರು ಎಂದರು.
ಧಾರವಾಡದ ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಕಣವಿ ಅವರು ಸಾಹಿತ್ಯೋಪಾಸಕರಾಗಿದ್ದರು. ಕಳೆದ 75 ವರ್ಷಗಳಿಂದ ಓದು-ವ್ಯಾಸಂಗ, ಹಿರಿಯ-ಕಿರಿಯ ಲೇಖಕರ ಜತೆಗೆ ನಿರಂತರ ಒಡನಾಟ ಹೊಂದಿದ್ದರು. ಆದರ್ಶ-ರಮ್ಯತೆ ಬದುಕಿಗೆ ಆಪ್ತವಾದರೂ ಸಮಾಜದ ವಾಸ್ತವವನ್ನು ಮೇಳೈಸಿ ಕಾವ್ಯ ಬರೆದಿದ್ದಾರೆ. ಸಮಾಧಾನ ಭಾವ ಕಣವಿ ಕಾವ್ಯದ ಮಾರ್ಗವಾಗಿತ್ತು ಎಂದು ಹೇಳಿದರು.
ತುಮಕೂರು ವಿವಿ ಪ್ರಾಧ್ಯಾಪಕಿ ಪ್ರೊ.ಗೀತಾ ವಸಂತ ಮಾತನಾಡಿ, ಮೆಲುದನಿಯಲ್ಲಿಯೂ ಎಂಥದ್ದೇ ಸಂದಿಗ್ಧತೆಯನ್ನು ಎದುರಿಸುವ ಸಾಧ್ಯತೆಯಿದೆ ಎನ್ನುವುದು ಕಣವಿ ಅವರ ಕಾವ್ಯದಿಂದ ಅರಿವಾಗುತ್ತದೆ. ಅವರ ಕಾವ್ಯಕ್ಕೆ ನೀಲಾಂಬಿಕೆ ಕವಿತೆ, ಬಿಸ್ಮಿಲ್ಲಾ ಖಾನ್ ಅವರ ಶಹನಾಯ ಪ್ರೇರಕವಾಗಿದ್ದವು ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ್, ಪ್ರೊ.ವಿ.ಎಚ್.ಅಯ್ಯಣ್ಣನವರ, ಚಂದ್ರಕಾಂತ ಅಕ್ಕಣ್ಣ, ಡಾ.ಮಲ್ಲಿಕಾರ್ಜುನ ಆಮಣೆ, ಡಾ.ಕಿರಣ ಮಲೋದೆ, ಡಾ.ವಿವೇಕ ಸಜ್ಜನ್, ರಮೇಶ ಕಾಂಬಳೆ ವರ್ಚುವಲ್ ವೇದಿಕೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಅಲ್ಲಮ ಪ್ರಭು ಕಾಲೇಜಿನಲ್ಲಿ ಕವಿ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು. ಡಾ.ಶಿವಾಜಿ ಮೇತ್ರೆ ವಂದಿಸಿದರು.