

ಪಂಚನಹಳ್ಳಿ: ಜಾನಪದ ಕಲೆ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಹೇಳಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಂಸ್ಕೃತಿ ಶ್ರೀಮಂತವಾದುದು. ಜನಪದರು ಅನಕ್ಷರಸ್ಥರಾದರೂ ಜನಪದ ಗೀತೆಗಳನ್ನು ಕಟ್ಟಿ ಹಾಡುತ್ತಿದ್ದರು. ಆ ಹಾಡುಗಳಲ್ಲಿ ಅವರ ಜೀವನದ ಅನುಭವ ಅಡಗಿರುತ್ತಿತ್ತು. ಇಂಥ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರ್ಕಾರ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮದ ಮೂಲಕ ಜಾನಪದ ಉತ್ಸವವನ್ನು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ನಡೆದು ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಹೆಚ್ಚಿನ ಅರಿವು ಮೂಡಲಿ ಎಂದರು.
ಪ್ರಾಚಾರ್ಯ ಡಾ. ದೇವರಯ್ಯ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಜನಪದ ಸಂಸ್ಕೃತಿ ಮಾಯವಾಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಜನಪದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯ ಮಾಡಿಕೊಡಬೇಕಾಗಿರುವುದು ಅನಿವಾರ್ಯ ಎಂದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಜನಪದರು ಬಳಸುತ್ತಿದ್ದ ಪುರಾತನ ವಸ್ತುಗಳು ಮತ್ತು ರೈತರು ಬಳಸುತ್ತಿದ್ದ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಗ್ಗಿ ಉತ್ಸವದ ಪ್ರಾತಕ್ಷಿಕೆ ಏರ್ಪಡಿಸಲಾಗಿತ್ತು. ದೇಸಿ ತಿಂಡಿಗಳನ್ನು ಹಂಚಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಸಿಡಿಸಿಸಿ ಸದಸ್ಯರಾದ ಲತಾ ಓಂಕಾರಪ್ಪ, ಸುಜಾತಾ, ಪ್ರಾಧ್ಯಾಪಕರಾದ ಎ.ಆರ್.ಮಹೇಂದ್ರ, ವಾಣಿ, ಕುಮಾರಸ್ವಾಮಿ, ಎ.ಲೀಲಾವತಿ, ಮಾಧುರಿ ಮತ್ತು ಅತಿಥಿ ಉಪನ್ಯಾಸಕರು ಇದ್ದರು.