ಬದುಕಿನ ಅನುಭವ, ಜೀವನ ಪಾಠ ಕಲಿಸಲಿದೆ ರಂಗಭೂಮಿ

mysore
Published on

ಮೈಸೂರು: ರಂಗಭೂಮಿ ಬದುಕಿನ ಅನುಭವ, ಜೀವನ ಪಾಠವನ್ನು ಕಲಿಸಿಕೊಡುತ್ತದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಾಯಣದ ಆವರಣದ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪೂರ್ಣ ಪ್ರಮಾಣದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗುವುದು ಕಷ್ಟಕರ. ಇದರಿಂದಾಗಿ ಹವ್ಯಾಸಿ ರಂಗಭೂಮಿ ತಂಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ರಂಗಾಯಣದ ಮಾಡಬೇಕಾದ ಕೆಲಸವನ್ನು ಹವ್ಯಾಸ ರಂಗಭೂಮಿ ತಂಡಗಳು ಮಾಡುತ್ತಿವೆ. ವೃತ್ತಿಪರತೆ ಇಲ್ಲದಿದ್ದರೆ ಇಂತಹ ಕಾರ್ಯವಾಗಲ್ಲ ಎಂದರು.

ಹವ್ಯಾಸಿ ರಂಗಭೂಮಿ ತಂಡಗಳು ರಂಗ ಶಿಬಿರಗಳ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಸಣ್ಣ ಬೀಜಗಳನ್ನು ಬಿತ್ತುತ್ತಿವೆ. ಇದು ಭವಿಷ್ಯದಲ್ಲಿ ಮೈಸೂರಿನ ಸಾಂಸ್ಕೃತಿಕ ಲೋಕ ಬದಲಾವಣೆ ತರಲಿದೆ. ಹೊಸ ಪ್ರತಿಭೆಗಳ ಉದಯಕ್ಕೂ ಕಾರಣವಾಗಲಿದೆ ಎಂದು ಹೇಳಿದರು.

ನಾಟಕ ತರಬೇತಿ ಎಂಬುದು ಸಾಂಸ್ಕೃತಿಕ ಸನ್ಮಾರ್ಗ ಕಾಯಕ. ಇದರ ಪರಿಣಾಮ ಸಮಾಜದ ಮೇಲೆ ದೊಡ್ಡದು. 2008ರಲ್ಲಿ ತರಬೇತಿ ಶಿಬಿರದಲ್ಲಿ ನನ್ನೊಂದಿಗೆ ಇದ್ದ ಕಲಾವಿದರು ಈಗ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು, ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ ಎಂದರು.

ರಂಗಾಯಣದಿಂದ ನಡೆಯುವ ಕಾಲೇಜು ರಂಗೋತ್ಸವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಒಂದೊಂದು ನಾಟಕ ಪ್ರದರ್ಶಿಸಲಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮುಂಬರುವ ಕಾಲೇಜು ರಂಗೋತ್ಸವದಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ಅವಕಾಶದ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕ ಬಿ.ಎಂ.ರಾಮಚಂದ್ರ ಮಾತನಾಡಿ, ರಂಗಭೂಮಿಯಲ್ಲಿ ಸುಲಭವಾಗಿ ಅವಕಾಶ ದೊರೆಯುವುದಿಲ್ಲ. ಆದ್ದರಿಂದ ಸಿಕ್ಕಿರುವ ಅವಕಾಶವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಮಾತನಾಡಿ, ಕರೊನಾ ಬಳಿಕ ಮೈಸೂರಿನಲ್ಲಿ ನಾಟಕ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆ ಹೆಚ್ಚಾಗಿವೆ. ಮೊದಲು ಇಷ್ಟು ಇರಲಿಲ್ಲ.

ರಂಗಭೂಮಿ ಇತಿಹಾಸವನ್ನು ರಂಗಾಸಕ್ತ ಮಕ್ಕಳು ಅರಿತುಕೊಳ್ಳಬೇಕು. ಇದರಿಂದ ನಾಟಕರಂಗದ ಅನೇಕ ಮಹನೀಯರ ಪರಿಚಯವಾಗಲಿದೆ. ಇದರಿಂದ ನಿಮ್ಮೊಳಗೆ ಗಟ್ಟಿ ಸತ್ವ ಸ್ಥಾಪಿತತವಾಗಲಿದೆ. ರಂಗಭೂಮಿಂುಲ್ಲಿ ತೊಡಗಿಸಿಕೊಳ್ಳುವುದು ಪರಿಣಾಮಕಾರಿ ಆಗಲಿದೆ ಎಂದರು.

ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ತಲಕಾಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net