ಬದುಕಿಗೆ ಬೆಳಕು ನೀಡುವ ಶಕ್ತಿ ಗುರುವಿಗಿದೆ

chn july 30 guruvandane (1)
Published on

ಚನ್ನಗಿರಿ: ಬಾಲ್ಯದಲ್ಲಿ ಆಟ, ಪಾಠದ ಜತೆಗೆ ತುಂಟಾಟ ಮಾಡಿದವರೆಲ್ಲ 30 ವರ್ಷಗಳ ಬಳಿಕ ಒಂದೆಡೆ ಸೇರಿದ್ದರು. ಈ ದಿನ ಅವರ ಸಂಭ್ರಮಕ್ಕೆ ಪಾರವೇ ಇಲ್ಲದಾಗಿತ್ತು. ಕಲಿಸಿದ ಗುರುಗಳನ್ನು ಕಂಡು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತೋಷ. ಗುರುಶಿಷ್ಯರು ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದ ಸುಂದರ ಘಳಿಗೆಗೆ ಭಾನುವಾರ ಇಡೀ ದಿನ ಸಾಕ್ಷಿಯಾಗಿತ್ತು.
ವಿದ್ಯಾಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆಯೊಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ವೇದಿಕೆ ಹಳೇ ನೆನಪುಗಳನ್ನು ಮತ್ತೆ ಕೆದಕಿತ್ತು.
ಶಿಕ್ಷಕ ಪಾಂಡುರಂಗ ಪರಾಂಡೆ ಮಾತನಾಡಿ, ಜೀವನವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವವರು ಗುರುಗಳು. ಭಾರತದ ಸಂಸ್ಕೃತಿ ಉಳಿದಿರುವುದು ಗುರುಗಳಿಂದ, ಅಕ್ಷರ ಜ್ಞಾನ ಪಡೆಯಲು ಪಾಲಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಾರೆ. ಅಲ್ಲಿಂದ ಮಕ್ಕಳಿಗೆ ಗುರುಗಳ ಸಂಪರ್ಕ ಬೆಳೆಯುತ್ತದೆ. ಗುರುಗಳು ವಿದ್ಯೆಯನ್ನು ಕಲಿಸುವ ಜತೆಯಲ್ಲಿ ತಂದೆ, ತಾಯಿ ಸಹೋದರನಾಗಿ ಅವರ ಬಳಿಯಲ್ಲಿ ಇದ್ದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗುವವರೆಗೆ ಸ್ನೇಹ, ಪ್ರೀತಿ ತೋರಿಸುತ್ತಾ ತನ್ನಲ್ಲಿರುವ ಅಗಾಧವಾದ ಜ್ಞಾನ ಧಾರೆ ಎರೆಯುತ್ತಾರೆ. ಅಂತಹ ಗುರುಗಳನ್ನು ಮಕ್ಕಳು ಜೀವನ ಇರುವವರೆಗೆ ಮರೆಯುವುದಿಲ್ಲ ಎಂದರು.
ಗುರುವಿನ ಗುಲಾಮನಾಗುವ ತನಕ ದೊರೆಯುವುದಿಲ್ಲ ಮುಕುತಿ ಎಂಬ ಗಾದೆಯಂತೆ ಜೀವನದಲ್ಲಿ ಪಾಲಕರ ಪಾತ್ರ ಎಷ್ಟು ಮುಖ್ಯವೋ ಗುರುವಿನ ಪಾತ್ರವೂ ಅಷ್ಟೇ ಮುಖ್ಯ. ಮಕ್ಕಳಲ್ಲಿನ ಅಂಧಕಾರ ದೂರ ಮಾಡಿ ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿ ಗುರುಗಳು. ಬದುಕಿನಲ್ಲಿ ಏನಾದರು ಸಾಧಿಸಬೇಂದರೆ ಗುರುವಿನ ಮಾರ್ಗದರ್ಶನ ಅವಶ್ಯವಾಗಿ ಬೇಕು ಎಂದರು.
ವಿದ್ಯಾರ್ಥಿಯಾಗಿ ಅಗಮಿಸಿದ್ದ ವಿಜ್ಞಾನಿ ಟಾ.ಸುನೀಲ್‌ಕುಮಾರ್ ಮಾತನಾಡಿ, ಶಾಲೆಯಲ್ಲಿ ಇರುವ ಮಕ್ಕಳ ಪ್ರತಿಭೆ ಗುರುತಿಸಿ ಅದರಲ್ಲಿ ಆಸಕ್ತಿ ತೋರಿಸಿ ಸಾಧಕನಾಗುವಂತೆ ಮಾಡುವುದು ಗುರುಗಳ ಕರ್ತವ್ಯ. ತಮ್ಮಲ್ಲಿರುವ ಅಂಧಕಾರ ಸುಜ್ಞಾನವೆಂಬ ಬೆಳಕಿನ ಮೂಲಕ ಹೋಗಲಾಡಿಸಿ ವಿದ್ಯೆಯ ಜತೆಗೆ ಸಂಸ್ಕಾರ ನೀಡುತ್ತಾರೆ. ಕಲಿತಂತ ವಿದ್ಯಾರ್ಥಿ ಉನ್ನತ ಪ್ರಜೆಯಾಗಿ ಹುದ್ದೆಯಲ್ಲಿ ಇದ್ದರೂ ತಾನು ಕಲಿತಂತ ಶಾಲೆ ಮರೆಯುವುದಿಲ್ಲ ಎಂದು ಹೇಳಿದರು.
ಸರಿಯಾದ ದಾರಿಯಲ್ಲಿ ನಡೆದರೆ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಗುರುಗಳು ನಮ್ಮ ಬಾಳಿನ ದೇವರು. ಹಣೆ ಬರಹವನ್ನು ಬರೆಯುವ ಶಕ್ತಿ ಹೊಂದಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ 30 ಶಿಕ್ಷಕರು, ಮೂವರು ಡಿ ದರ್ಜೆ ನೌಕರರನ್ನು ಗೌರವಿಸಲಾಯಿತು.
ಶಿಕ್ಷಕರಾದ ಸಾವಿತ್ರಮ್ಮ, ಗಾಯಿತ್ರಿದೇವಿ, ಚನ್ನಬಸಪ್ಪ, ಬಸವರಾಜ್, ನಾಗರಾಜ್, ವಿದ್ಯಾರ್ಥಿಗಳಾದ ಕೆ.ಆರ್. ದೀಪಕ್, ವಾದಿರಾಜ್, ಕೃಷ್ಣಮೂರ್ತಿ, ಚಿದಾನಂದ, ಸಂದೀಪ, ಶುಭೋದಯ, ನಂದಿನಿ, ರಾಜು, ರಾಜಶೇಖರ್ ಇದ್ದರು.
ಸಿಹೆಚ್‌ಎನ್ 01_ 29 ಜುಲೈ.
ಚನ್ನಗಿರಿಯಲ್ಲಿ ನಡೆದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವಿಸಿದರು. ಗುರುಗಳಾದ ಸಾವಿತ್ರಮ್ಮ, ಗಾಯಿತ್ರಿದೇವಿ, ಗುರೂಜಿ ಚನ್ನಬಸಪ್ಪ, ಬಸವರಾಜ್, ನಾಗರಾಜ್, ವಿದ್ಯಾರ್ಥಿಗಳಾದ ಕೆ.ಆರ್.ದೀಪಕ್, ವಾದಿರಾಜ್, ಕೃಷ್ಣಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net