

ಯಾದಗಿರಿ: ಇಂದಿನ ಯುವ ಸಾಹಿತಿಗಳು ಪ್ರತಿಯೊಬ್ಬರ ಬದುಕಿಗೆ ಪೂರಕವಾಗಿ,ಅವರ ಬಾಳಿಗೆ ಬೆಳಕು ನೀಡಿ ಯಶಸ್ವಿಗೆ ದಾರಿ ದೀಪವಾಗುವಂಥ ಗಟ್ಟಿ ಸಾಹಿತ್ಯ ರಚನೆಗೆ ಮುಂದಾಗಬೇಕು ಎಮದು ಹಿರಿಯ ಸಂಶೋಧಕ ಮುಡಬಿ ಗುಂಡೇರಾವ್ ಸಲಹೆ ನೀಡಿದರು.
ಶನಿವಾರ ನಗರದ ಕಸಾಪ ಭವನದಲ್ಲಿ ಸಗರ ಕಲಾನಿಕೇತನ ಟ್ರಸ್ಟ್ನಿಂದ ಆಯೋಜಿಸಿದ್ದ ಸೈನಿಕರೊಂದಿಗೆ ಸ್ವಾತಂತ್ರ್ಯ ಶ್ರಾವಣ ಸಂಭ್ರಮ ಕಾರ್ಯಕ್ರಮ ಹಾಗೂ ಡಾ.ದೇವೇಂದ್ರಪ್ಪ ಹಡಪದ ಅವರ ಕನ್ನಡದ ನುಡಿಮುತ್ತುಗಳು ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಬಿಳಿ ಹಾಳೆಯಲ್ಲಿ ಎರಡು ಸಾಲು ಗೀಚಿದ ಮಾತ್ರಕ್ಕೆ ಅದು ಸಾಹಿತ್ಯ ಆಗುವುದಿಲ್ಲ. ಪ್ರಸ್ತುತ ಸನ್ನಿವೇಶಗಳನ್ನು ಕವಿ ಅನುಭವಿಸಿ, ವರ್ತಮಾನಕ್ಕೂ ವಾಸ್ತವವಾಗುವಂತೆ ಕಾವ್ಯ, ಕಾದಂಬರಿ ರಚಿಸಿದಾಗ ಮಾತ್ರ ಅದರಲ್ಲಿ ಲಾಲಿತ್ಯ ಉಳಿಯಲು ಸಾಧ್ಯವಾಗಲಿದೆ ಎಂದರು.
ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕೇವಲ ಮೊಬೈಲ್ ಬಳಕೆಯಿಂದ ನಮ್ಮ ಜ್ಞಾನ ವೃದ್ಧಿಯಾಗುವುದಿಲ್ಲ. ಯುವಕರಲ್ಲಿ ರಾಷ್ಟ್ರಾಭಿಮಾನ, ಸಾಹಿತ್ಯದ ಸೆಳೆತ ಹೆಚ್ಚಾಗಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮನದಲ್ಲಿ ಇದ್ದರೆ ಸಾಲದು. ಅದು ವಿಸ್ತಾರವಾಗಿ ಬೆಳೆಯಬೇಕು. ದೇವೇಂದ್ರಪ್ಪ ಹಡಪದ ಅವರು ಸಾಮಾನ್ಯ ಭಾಷೆಯಲ್ಲಿ ಗ್ರಾಮೀಣ ಸೊಗಡನ್ನು ಬಣ್ಣಿಸಿದ್ದಾರೆ ಎಂದು ತಿಳಿಸಿದರು.
ಯೋಧರಾದ ದುರ್ಗಪ್ಪ ನಾಯಕ, ಅಮರಪ್ಪ ಸಿದ್ರಾ, ದೇವೇಂದ್ರ ಮಸರ್್, ರಮೇಶ್ ಮಾನು, ಮಲ್ಲಿನಾಥ್ ಮರ್ಸರಿಗೆ ಸನ್ಮಾನಿಸಲಾಯಿತು. ಲೇಖಕ ಡಾ.ದೇವೇಂದ್ರಪ್ಪ ಹಡಪದ, ಕಸಾಪ ತಾಲೂಕಾಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ, ಮಾನಪ್ಪ ಹಡಪದ, ಟ್ರಸ್ಟ್ ಅಧ್ಯಕ್ಷ ಡಾ.ಬಸವರಾಜ ಸಿನ್ನೂರ ಇದ್ದರು.