

ಚಿತ್ರದುರ್ಗ: ಬದುಕಿಗೆ ಅಗತ್ಯವಿರುವ ಕೌಶಲಾಧಾರಿತ ಶಿಕ್ಷಣ ನೀಡುವಂತೆ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಶಿಕ್ಷಕರಿಗೆ ಸಲಹೆ ನೀಡಿದರು.
ಸೈನ್ಸ್ ಫೌಂಡೇಷನ್‌ನಿಂದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಶಿಕ್ಷಕರ ದಿನಾಚರಣೆ ಹಾಗೂ ಆರು ಶಿಕ್ಷಕರಿಗೆ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಶಿಕ್ಷಕರನ್ನು ಗುರುತಿಸಿ ಗೌರವಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ವಿಜ್ಞಾನವಿಲ್ಲದ ಜಗತ್ತು ಕಾಣಲು ಸಾಧ್ಯವಿಲ್ಲ. ಸಂಗೀತ, ಕಲೆಯಲ್ಲಿ ವಿಜ್ಞಾನವಿದೆ. ಯಾವುದನ್ನೇ ಆಗಲಿ ಪ್ರಶ್ನಿಸುವುದು, ಪ್ರಯೋಗಕ್ಕೆ ಒಳಪಡಿಸುವುದೇ ವಿಜ್ಞಾನ. ಶಿಕ್ಷಣದಲ್ಲಿ ಎಲ್ಲವೂ ಅಡಗಿದೆ. ಶಿಕ್ಷಣ ಎಂಬುದು ಮನುಷ್ಯನನ್ನು ಮಾನವ ಸಂಪನ್ಮೂಲವನ್ನಾಗಿಸುತ್ತದೆ. ಜ್ಞಾನದ ಜತೆಗೆ ಕೌಶಲ, ಸಂಸ್ಕಾರ ಕೊಡುವುದೇ ಶಿಕ್ಷಣ ಎಂದು ಹೇಳಿದರು.
ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕ ಎಚ್. ಗೋವಿಂದಪ್ಪ ಮಾತನಾಡಿ, ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಫೌಂಡೇಷನ್ ಕಾರ್ಯವನ್ನು ಶ್ಲಾಘಿಸಿದರು.
ಫೌಂಡೇಷನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ, ಪ್ರೊ.ಎಂ.ಆರ್. ಜಯಲಕ್ಷ್ಮೀ ಮಾತನಾಡಿದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿ.ಎಚ್.ಎಂ. ಆಶಾ, ಸಿ. ವೀರಣ್ಣ, ಸಿ. ಮುತ್ತುರಾಜ್, ಬಿ.ಜೆ. ರಂಗನಾಥ್, ಎಸ್.ಆರ್. ವಸಂತಕುಮಾರ್, ಎಂ.ಎಚ್. ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಫೌಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ಯರ‌್ರಿಸ್ವಾಮಿ, ನಿರ್ದೇಶಕ ಡಾ.ಇ. ರುದ್ರಮುನಿ, ಖಜಾಂಚಿ ಕೆ.ಎ.ನಾಗಲಿಂಗರೆಡ್ಡಿ ಇದ್ದರು. ಪ್ರಶಿಕ್ಷಣಾರ್ಥಿ ಕೆ.ಸಿ.ರೇಖಾ ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಹನುಮಂತರೆಡ್ಡಿ ಸ್ವಾಗತಿಸಿ, ಪ್ರಶಿಕ್ಷಣಾರ್ಥಿ ಮಲ್ಲಿಕಾರ್ಜುನಗೌಡ ವಂದಿಸಿದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.