

ಆಲೂರು: ಗ್ರಂಥಗಳು ಮನುಷ್ಯನ ಬದುಕಿಗೆ ಆನಂದದ ಅನುಭೂತಿ ನೀಡುತ್ತವೆ. ಅದರಲ್ಲೂ ಅಧ್ಯಾತ್ಮ ಕೃತಿಗಳು ಮಾನವನ ಮನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಿಗೆಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಾಂಬುದಿ ಬೆಟ್ಟದ ತಪೋಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಮದ್ ಉಜ್ಜಯಿನಿ ಮಹಾತಪಸ್ವಿ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಭಗವತ್ಪಾದರ 87ನೇ ವರ್ಷದ ಪುಣ್ಯ ಸ್ಮರಣೆ ಮತ್ತು ಧರ್ಮ ಸಮಾರಂಭದಲ್ಲಿ ಮಾತನಾಡಿದರು.
ಜ್ಞಾನಯೋಗಿ ಸಿದ್ಧಲಿಂಗ ಸ್ವಾಮೀಜಿ ಮೆಚ್ಚಿಕೊಂಡ ಅಷ್ಟೋತ್ತರ ಶತನಾಮ, ಪಂಚಾಕ್ಷರಿ ನಾಮಗಳಿಗೆ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅನನ್ಯ ವ್ಯಾಖ್ಯಾನ ಬರೆದಿದ್ದಾರೆ. ಇಂತಹ ಕೃತಿಗಳು ನಿಜವಾಗಿಯೂ ಮನುಷ್ಯನ ಮನಸ್ಸು-ಹೃದಯ ಅರಳಿಸುತ್ತವೆ ಎಂದರು.
ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಭಗವತ್ಪಾದರು ತಮ್ಮ ಕಾಲಾವಧಿಯಲ್ಲಿ ಧಾರ್ಮಿಕ ಕಾರ್ಯಗಳು, ಸಮಾಜ ಸೇವೆ ಸೇರಿದಂತೆ ಶೈಕ್ಷಣಿಕವಾಗಿಯೂ ಶ್ರಮಿಸಿದ್ದವರು. ಇಂತಹ ಮಹಾನ ವ್ಯಕ್ತಿಗಳನ್ನು ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಲೋಕಾರ್ಪಣೆ: ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದದಿಂದ ಶ್ರೀ ವನದುರ್ಗ ಪರಮೇಶ್ವರಿ ಶಿವಾತ ವಾಹ್ಮಯ ಪ್ರಕಾಶನದಿಂದ ಹೊರ ತಂದಿರುವ ಶ್ರೀ ಮದ್‌ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳ ‘ಸಹಸ್ರ ನಾಮಾವಳಿ’ ಕೃತಿಯನ್ನು ರಂಭಾಪುರಿ ಶ್ರೀಗಳು ಇದೇ ವೇಳೆ ಲೋಕಾರ್ಪಣೆ ಮಾಡಿದರು.
ರಂಭಾಪುರಿ ಶ್ರೀಗಳಿಂದ ಸಿದ್ಧಲಿಂಗ ಭಗವತ್ಪಾದರ ಗದ್ದುಗೆಗೆ ಮಹಾ ರುದ್ರಾಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೆಳಕಿ, ಹುಣಸಘಟ್ಟ, ಬೀರೂರು, ಮಾದಿಹಳ್ಳಿ, ನಂದಿಪುರ, ಕಾರ್ಜುವಳ್ಳಿ, ಚನ್ನಳು, ಕಡೇನಂದಿಹಳ್ಳಿ, ಪಾಲ್ಲೂರು, ಹಾರನಹಳ್ಳಿ, ಮಳಲಿಮಠ, ಹೆಣ್ಣೆ ತಾವರೆಕೆರೆ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಕಾಂಗ್ರೆಸ್ ಮುಖಂಡ ದೋರನಾಳು ಪರಮೇಶ್, ರತ್ನಮ್ಮ ಮಂಜುನಾಥ, ಗ್ರಾಪಂ ಅಧ್ಯಕ್ಷ ಲಕ್ಷ್ಮೀ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಧ್ರುವಕುಮಾರ, ಭದ್ರಾವತಿ ಎಸ್. ಎಸ್.ಉಮೇಶ, ಕೆ.ಎಸ್.ಚಂದ್ರಶೇಖರ ಮುಂತಾದವರು ಹಾಜರಿದ್ದರು.