ಬದುಕಲ್ಲಿ ಮಾನವೀಯ ಮೌಲ್ಯಗಳು ಅಗತ್ಯ

IMG_20230404_113822
Published on

ಚನ್ನರಾಯಪಟ್ಟಣ: ಸಮಾಜದಲ್ಲಿ ಉತ್ತಮ ಮನುಷ್ಯನಾಗಿರಲು ಅವಶ್ಯಕವಾಗಿರುವ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿದ್ದು, ಪಾಲಕರು ಮಕ್ಕಳಿಗೆ ಮಾನವೀಯ ಗುಣಗಳನ್ನು ಕಲಿಸುವಲ್ಲಿ ವಿಫಲಗೊಳ್ಳುತ್ತಿರುವುದು ಆತಂಕಕಾರಿ ಹಾಗೂ ವಿಷಾದನೀಯ ಸಂಗತಿಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ ಕಳವಳವ್ಯಕ್ತಪಡಿಸಿದರು.

ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಯದುನಂದನ ಪ್ರಕಾಶನ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಯುವ ಸಾಹಿತಿ ರಾಜೇಶ್ ಬಿ.ಹೊನ್ನೇನಹಳ್ಳಿ ರಚಿಸಿರುವ ‘ನೀನಿರಲು ಮತ್ತೇನು ಬೇಕು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇಂದು ವೈಜ್ಞಾನಿಕವಾಗಿ ನಾವು ಎಷ್ಟೇ ಪ್ರಗತಿ ಹೊಂದಿದ್ದರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ ಎಂದು ಬೇಸರಿಸಿದರು.

ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಿದ್ದಂತೆ. ಹಾಗೇ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಕೂಡ ಹೌದು. ಮಾನವೀಯ ಮೌಲ್ಯಗಳು ಬದುಕಿಗೆ ಅವಶ್ಯವಾಗಿದ್ದು, ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಇವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಮೌಲ್ಯಗಳಿಲ್ಲದ, ಸದಭಿರುಚಿ ಇಲ್ಲದ ಜೀವನ ವ್ಯರ್ಥ ಎಂದರು.

ಚಾರುಕೀರ್ತಿ ಭಟ್ಟರಕ ಸ್ವಾಮೀಜಿ ಅವರು ಈ ನೆಲದ ಬಹುದೊಡ್ಡ ಕಾವ್ಯ. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಯುವ ಬರಹಗಾರರು ಬರೆದ 60 ಸಾವಿರ ಪುಸ್ತಕಗಳನ್ನು ಕೊಂಡು ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದರ ಮೂಲಕ ಜಿಲ್ಲೆಯ ಬರಹಗಾರರಿಗೆ ಆರ್ಥಿಕ ಶಕ್ತಿ ನೀಡುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ. ಮಹೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಹಿರಿಯ ಸಾಹಿತಿ ಎಚ್.ಎಲ್. ಚನ್ನೇಗೌಡ ಕೃತಿ ಬಿಡುಗಡೆ ಮಾಡಿದರು.

ಯುವ ಸಾಹಿತಿ ರಾಜೇಶ್ ಬಿ.ಹೊನ್ನೇನಹಳ್ಳಿ ಕವಿನುಡಿಗಳನಾಡಿದರು. ಪರಿಸರ ಪ್ರೇಮಿ ಚ.ನಾ. ಅಶೋಕ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನಕುಮಾರ್, ಬಿ.ಆರ್. ಬೊಮ್ಮೇಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಕಾರ್ಯದರ್ಶಿ ಮಹದೇವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net