

ಕುರುಗೋಡು: ಬದುಕಿಗೆ ಧರ್ಮಕ್ಕಿಂತ ಮಾನವೀಯ ಮೌಲ್ಯ ಮುಖ್ಯವಾಗಿದ್ದು, ಜಾತಿ, ಧರ್ಮದ ತಾರತಮ್ಯ ಮಾಡದೆ ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಪ್ರತಿಯೊಬ್ಬರಿಗೂ ಉತ್ತಮ ಮಾರ್ಗದರ್ಶನ ನೀಡಿ ಬದುಕಿಗೆ ಹೊಸ ಉತ್ಸಾಹ ತುಂಬಿದ ಬಿ.ಎಂ.ಕುಮಾರಸ್ವಾಮಿ ಅವರ ಬದುಕು ಅನುಕರಣೀಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ಬಿ.ಎಂ.ಕುಮಾರಸ್ವಾಮಿ ಪಬ್ಲಿಕ್ ಶಾಲೆ ಆವರಣದಲ್ಲಿ ಬಿ.ಎಂ.ಎರ‌್ರಿಸ್ವಾಮಿ ಸಹೋದರರ ಬಳಗದಿಂದ ಆಯೋಜಿಸಿದ್ದ ಲಿಂ.ವೇದಮೂರ್ತಿ ಬಿ.ಎಂ.ಕುಮಾರಸ್ವಾಮಿ ಗದ್ದುಗೆ ಮತ್ತು ಶಿಲಾಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ತಂದೆ-ತಾಯಿಗೆ ಊಟ ಮತ್ತು ಮೈ ತುಂಬ ಬಟ್ಟೆ ನೀಡದ ಮಕ್ಕಳು ಇರುವ ಕಾಲಘಟ್ಟದಲ್ಲಿ ತಂದೆಗೆ ಶಿಲಾಮಂಟಪ ಕಟ್ಟಿಸುವ ಜತೆಗೆ ಅನೇಕ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿರುವುದು ಶ್ಲಾಘನೀಯ. ಜೀವನ ತೆರದ ಪುಸ್ತಕ ಇದ್ದಂತೆ, ದೇವರು ಮೊದಲ ಪುಟದಲ್ಲಿ ಹುಟ್ಟು, ಕೊನೆಯ ಪುಟದಲ್ಲಿ ಸಾವನ್ನು ಬರೆದಿದ್ದು, ಈ ನಡುವಿನ ಪುಟದಲ್ಲಿ ಬದುಕನ್ನು ಶ್ರೀಮಂತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್ ಮಾತನಾಡಿ ಯಾವುದೇ ಜಾತಿ, ಧರ್ಮಕ್ಕಿಂತ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಸರ್ವ ಜನರ ಹಿತಕ್ಕಾಗಿ ದುಡಿದ ಕುಮಾರಸ್ವಾಮಿ ಅವರು ನನ್ನ ಬಾಲ್ಯ ಹಾಗೂ ಏಳಿಗೆಯ ಮೇಲೆಯೂ ಪ್ರಭಾವ ಬೀರಿದ್ದರು ಎಂದು ಸ್ಮರಿಸಿದರು.
ಬಳ್ಳಾರಿಯ ಬಸವೇಶ್ವರ ನಗರದಲ್ಲಿ ಬಾಳೆಹೊನ್ನೂರು ಪೀಠದಿಂದ ನಿರ್ಮಾಣ ಮಾಡುತ್ತಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ವಿದ್ಯಾರ್ಥಿ ನಿಲಯಕ್ಕೆ ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ಶಾಸಕರಾದ ಬಿ ನಾಗೇಂದ್ರ, ಭರತ್ ರೆಡ್ಡಿ ತಲಾ 10 ಲಕ್ಷ ರೂ. ದೇಣಿಗೆ ನೀಡುವುದರ ಜತೆಗೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದರು.
ತೆಕ್ಕಲಕೋಟೆಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮರಿಯಮ್ಮನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಹರಗಿನಡೋಣಿಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸಾಮೀಜಿ, ಬುಕ್ಕಸಾಗರ ಶ್ರೀ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಂ ಗುಡದೂರು ನೀಲಕಂಠಾರ್ಯ ತಾತ, ಸಜ್ಜಲಗುಡ್ಡ ದೊಡ್ಡಬಸವಾರ್ಯ ತಾತ, ಬಂಗಾರಿ ಕ್ಯಾಂಪ್ ಡಾ ಸಿದ್ದರಾಮೇಶ್ವರ ಶರಣರು, ಅರಳಿಹಳ್ಳಿ ಗವಿಸಿದ್ದೇಶ್ವರ ತಾತ, ಸಿದ್ಧರಾಂಪುರ ಚಿದಾನಂದಯ್ಯ ತಾತ, ಮಾಜಿ ಶಾಸಕ ಚಂದ್ರಯ್ಯಸ್ವಾಮಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಎರ‌್ರಿಸ್ವಾಮಿ, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುರುಗೋಡು ಮಲ್ಲಿಕಾರ್ಜುನ, ಪ್ರಮುಖರಾದ ನಾಗರಾಜ್ ಗೌಡ, ಮಲ್ಲಿಕಾರ್ಜುನ ಸ್ವಾಮಿ, ಬಿ.ಎಂ.ಜಡಿಸ್ವಾಮಿ, ಬಿ.ಎಂ.ಗಣೇಶ್ ಇತರರು ಇದ್ದರು.