ಬದಲಾವಣೆಗೆ ಶಿಕ್ಷಣವೊಂದೇ ಪ್ರಮುಖ ಅಸ್ತ್ರ

College
Published on

ಚಿತ್ರದುರ್ಗ: ಮಾನವರಲ್ಲಿ ಬದಲಾವಣೆ ತರಲು ಶಿಕ್ಷಣ ಬಿಟ್ಟರೆ ಮತ್ತಿನ್ಯಾವ ಪ್ರಮುಖ ಅಸ್ತ್ರವೂ ವಿಶ್ವದಲ್ಲಿಲ್ಲ ಎಂದು ಡಿಡಿಪಿಯು ಆರ್.ಪುಟ್ಟಸ್ವಾಮಿ ಹೇಳಿದರು.

ಬಾಲಕರ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಕಾಲೇಜು, ಶಾಲಾ ಶಿಕ್ಷಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ, ರೋವರ್ಸ್, ಎನ್‌ಎಸ್‌ಎಸ್ ಘಟಕ, ಇತರೆ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅತ್ಯಮೂಲ್ಯ. ಹೀಗಾಗಿ ಯಾರೂ ಇದರಿಂದ ವಂಚಿತರಾಗಬಾರದು. ವ್ಯಕ್ತಿತ್ವ ವಿಕಸನ, ಜೀವನಕ್ಕೆ ಭದ್ರತೆ ನೀಡುವಂತ ವಿಷಯಗಳ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧಕರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲಾ, ಕಾಲೇಜುಗಳಲ್ಲೇ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಬದುಕು ಉಜ್ವಲವಾಗಲಿದೆ. ಪ್ರಶ್ನಿಸುವ ಮನೋಭಾವ, ದುರಭ್ಯಾಸಗಳಿಂದ ದೂರ, ಉತ್ತಮ ಗುಣ ಅಳವಡಿಸಿಕೊಂಡು ಪಾಲಕರು, ಶಿಕ್ಷಕರು, ಸಮಾಜಕ್ಕೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಎಚ್.ಬಿ.ನರಸಿಂಹಮೂರ್ತಿ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದೆ. ಅದನ್ನು ಹೊರತೆಗೆಯುವ ಉದ್ದೇಶಕ್ಕಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಬೇಕು. ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡು ಭಯ, ಸಂಕೋಚ, ಕೀಳರಿಮೆ ಬಿಟ್ಟು ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಚಳ್ಳಕೆರೆ ಹಿರಿಯ ಸಾಹಿತಿ ತಿಪ್ಪಣ್ಣ ಬಿ. ಮರಿಕುಂಟೆ ಮಾತನಾಡಿ, ಹೊಸ ಪ್ರಯತ್ನ, ಅಧ್ಯಯನಗಳು ಬದುಕು ಕಟ್ಟಿಕೊಡಲಿದೆ. ವಿದ್ಯಾರ್ಥಿ ಜೀವನದಲ್ಲಿ ಎಚ್ಚರವಹಿಸಿದರೆ ಸಾಧನೆಯತ್ತ ಸಾಗಿ ಗುರಿ ತಲುಪುವುದು ಕಷ್ಟಕರವಲ್ಲ ಎಂದರು.

ಇದೇ ವೇಳೆ 2022-23ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಡಿ.ಎಸ್.ಸಿದ್ದೇಶ್, ಇ.ಟಿ.ನಿತಿನ್, ಆರ್.ವಿ.ಸಂಗೀತಾ, ಟಿ.ಪಿ.ಪಾಲಯ್ಯ, ಬಿ.ಎಸ್.ರಂಗನಾಥ್, ಎನ್.ಎಂ.ರವಿಕುಮಾರ್, ಆರ್.ವಿ.ಚಂದನಾ, ಎಂ.ಪ್ರಜ್ವಲ್, ಎನ್.ಪ್ರಿಯಾಂಕಾಗೆ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಲಾಯಿತು.

ಕಾಲೇಜಿನ ಉಪನ್ಯಾಸಕರಾದ ಡಾ.ಬಿ.ಕೃಷ್ಣಪ್ಪ, ಎನ್.ದೊಡ್ಡಪ್ಪ, ಗುರುನಾಥ, ಆರ್.ಚಂಪಕಲಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಡಾ.ಜೆ.ಮೋಹನ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಮಹಮದ್ ಜಕಾವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net