ಬದಲಾವಣೆಗೆ ತಕ್ಕಂತೆ ಇರಲಿ ಶಿಕ್ಷಣ

09
Published on

ವಿಚಾರ ಸಂಕಿರಣದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಭಿಪ್ರಾಯ

ತುಮಕೂರು: ಶಿಕ್ಷಣವೆಂಬದು ನಿರಂತರ ಬದಲಾವಣೆಯನ್ನು ಕಾಣುತ್ತಿದೆ. ಬದಲಾವಣೆಗೆ ತಕ್ಕಂತೆ ಪಠ್ಯಕ್ರಮ, ಬೋಧನಾ ಕ್ರಮಗಳನ್ನು ಉಪನ್ಯಾಸಕರು ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಜಿಎ್​ಜಿಸಿ ಅರ್ಥಶಾಸ್ತ್ರ ವಿಭಾಗ ಹಾಗೂ ತುಮಕೂರು ವಿವಿ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಅರ್ಥಶಾಸ್ತ್ರ ವಿಷಯವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಉಪಯುಕ್ತವನ್ನಾಗಿಸಲು ಉಪನ್ಯಾಸಕರು ಬದಲಾವಣೆಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಮೂಲ ಸೌರ್ಕಯದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ವಿಷಯವನ್ನು ಅರ್ಥಮಾಡಿಸುವ ರೀತಿಯಲ್ಲಿಯೇ ನಾವುಗಳು ಕೂಡ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಮಕ್ಕಳ ಸ್ನೇಹಿ ಪಠ್ಯಕ್ರಮದ ಮೂಲಕ ಅವರನ್ನು ಪೈಪೋಟಿಯ ಜಗತ್ತಿನಲ್ಲಿ ಈಜುವಂತಹ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಇತ್ತೀಚಿಗೆ ಅರ್ಥಶಾಸ್ತ್ರ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದಕ್ಕೆ ಕಾರಣ ಹಲವಾರು. ವಿಜ್ಞಾನ ವಿಷಯಕ್ಕಿಂತಲೂ ಕಠಿಣ ಎಂಬ ಮಾತುಗಳು ಸರ್ವೆಸಾಮಾನ್ಯವಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾರ್ಯದೊತ್ತಡ ಇಲ್ಲದೆ ಅರ್ಥಶಾಸ್ತ್ರ ವಿಷಯ ಭೋಧಿಸುವ ಶಿಕ್ಷಕರು ಕೆಲಸವಿಲ್ಲದೆ ಇರಬೇಕಾದ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡುವಂತಿಲ್ಲ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಂಡು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ನಾವು ಸಹ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುಬಲ್ಲವು ಎಂಬ ಆತ್ಮಸ್ಥೆ$ರ್ಯವನ್ನು ಹುಟ್ಟು ಹಾಕಬೇಕಿದೆ. ಬೋಧನ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಶಿವಚಿತ್ತಪ್ಪ ತಿಳಿಸಿದರು.

ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ರವೀಂದ್ರಕುಮಾರ್​, ಇಂದಿನ ವಿಷಯ ಅತ್ಯಂತ ಅರ್ಥಪೂರ್ಣವಾಗಿದೆ. ಹೊಸತನಗಳನ್ನು ಮೈಗೂಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳನ್ನು ತಲುಪುವುದು ಕಷ್ಟವಾಗಲಿದೆ. ಉನ್ನತ ಶಿಕ್ಷಣದಲ್ಲಿ ಹೊಸತನಗಳನ್ನು ತರುವ ಉದ್ದೇಶದಿಂದಲೇ ಸರ್ಕಾರ 1968, 1986 ಹಾಗೂ 2020ರಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. 20-20 ಎಂಬುದು ಮನರಂಜನೆಗಾಗಿ ಅಲ್ಲ. ಉನ್ನತ ಶಿಕ್ಷಣದ ಉನ್ನತ್ತೀಕರಣಕ್ಕೆ, ಹಾಗಾಗಿ ಪ್ರಾದ್ಯಾಪಕರು ಕೂಡ ಬದಲಾವಣೆಯ ವೇಗವನ್ನು ಅರಿತು, ಅದಕ್ಕೆ ಸಿದ್ಧರಾಗಿ, ಬದ್ಧರಾಗಿ ಕೆಲಸ ಮಾಡಬೇಕಾಗಿದೆ ಎಂದರು.

ನಾವೀನ್ಯತೆ ಎಂಬುದು ತಳಮಟ್ಟದಿಂದಲೇ ಆರಂಭವಾದರೆ ಹೆಚ್ಚಿನ ಲಾಭವಾಗಲಿದೆ. ಹೆಚ್ಚುವರಿ ಪಠ್ಯಕ್ರಮ, ಮಾರುಕಟ್ಟೆಯ ಬೇಡಿಕೆ ಅರಿತು ಪಠ್ಯ ಸಿದ್ಧಪಡಿಸಿ, ಹೊಸ ಪೀಳಿಗೆಯಲ್ಲಿ ಸುಸ್ಥಿರತೆ ಮತ್ತು ಪರಿಪೂರ್ಣತೆಯನ್ನು ತರಬೇಕಿದೆ. ಜಾತಿಗಿಂತ ಪ್ರತಿಭೆಗೆ ಪ್ರೋತ್ಸಾಹ ನೀಡುವ, ಪೂರ್ವಾಗ್ರಹ ಪೀಡಿತರಾಗದೆ, ವಿದ್ಯಾರ್ಥಿಗಳಿಂದ ಮಾತ್ರ ವಿಧೇಯತೆ ಬಯಸದೆ, ನಾವು ಸಹ ವಿಧೇಯರಾಗಿ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳ ಬೇಕಿದೆ. 2047ಕ್ಕೆ ಉತ್ತನ ಶಿಕ್ಷಣ ನೋಂದಣಿ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರು ಹೆಚ್ಚಿನ ಶ್ರಮ ಹಾಕಬೇಕಾಗಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಟಿ.ಡಿ.ವಸಂತ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿವಿ ಅರ್ಥಶಾಸ್ತ್ರ ಪರೀಕ್ಷಾ ಮಂಡಳಿ ಅಧ್ಯಕ್ಷ ಎನ್​.ಗೋವಿಂದರಾಜು, ಐಕ್ಯೂಎಸಿ ಸಂಚಾಲಕ ಎಸ್​.ಹರಿದಾಸ್​, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ.ಕೆ.ನಾಗರಾಜು, ಜಿ.ಕೆ.ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಉನ್ನತ ಶಿಕ್ಷಣದಲ್ಲಾಗುತ್ತಿರುವ ಬದಲಾವಣೆಗಳನ್ನು ಹೇಗೆ ತಮ್ಮ ಬೋಧನಾ ಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಮಕ್ಕಳಿಗೆ ವಿಷಯವನ್ನ ಹೇಗೆ ಅರ್ಥ ಮಾಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟಾರೆ ಸಾರಾಂಶ ಜನಸಾಮಾನ್ಯರ ಜೀವನ ಹಸನು ಮಾಡುವುದು, ಅವರ ಜೀವನ ಮಟ್ಟ ಸುಧಾರಿಸುವುದೇ ಆಗಿದೆ.

| ಡಾ.ಜಿ.ತಿಪ್ಪೇಸ್ವಾಮಿ ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net