ಬದಲಾಗುತ್ತಿರುವ ಜೀವನ, ಆಹಾರ ಶೈಲಿ ಕುರಿತು ಜಾಗೃತಿ ಮೂಡಿಸಿ: ಡಾ.ಬಿ.ಎಸ್.ಪ್ರಸಾದ್ ಸಲಹೆ

24
Published on
  • ಮೈಸೂರು: ಆಧುನಿಕ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಮತ್ತು ಆಹಾರ ಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಯುಷ್ ಮಂತ್ರಾಲಯದ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ಬಿ.ಎಸ್. ಪ್ರಸಾದ್ ತಿಳಿಸಿದರು.
  • ಲಲಿತಾದ್ರಿಪುರದಲ್ಲಿರುವ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯಭಾಷಣ ಮಾಡಿದರು.
  • ಜನಸಾಮಾನ್ಯರಲ್ಲಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗುತ್ತಿದೆ. ನಿರಂತರವಾಗಿ ದೊರೆಯುತ್ತಿರುವ ವಿದ್ಯುತ್, ಸಾಮಾಜಿಕ ಜಾಲತಾಣ, ಟಿವಿ ಸೇರಿದಂತೆ ಇನ್ನಿತರ ಮಾಧ್ಯಮದಿಂದ ಮಲಗುವುದು ತಡವಾಗಿ ಬೆಳಗ್ಗೆ ಏಳುವುದೂ ತಡವಾಗುತ್ತಿದೆ. ಇದರಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬದಲಾದ ಜೀವನ ಮತ್ತು ಆಹಾರ ಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
  • ವೈದ್ಯರು ತರಬೇತಿಯ ವೇಳೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಭಾರತಕ್ಕೆ ಇತ್ತೀಚಿನ ದಿನಗಳಲ್ಲಿ ವೈದ್ಯರ ಅಗತ್ಯತೆ ಹೆಚ್ಚಿದ್ದು, ಕೋವಿಡ್ ಎಲ್ಲರನ್ನೂ ಕಾಡುವುದರ ಜತೆಗೆ ಮುಂಜಾಗ್ರತಾ ಕ್ರಮ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿದೆ. ಆ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
  • ಭಾರತೀಯ ವೈದ್ಯ ಪದ್ಧತಿಗೆ ಈಗ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ವಿದ್ಯಾರ್ಥಿಗಳು ವೀಸಾ ಪಡೆದು ವಿದೇಶಕ್ಕೆ ತೆರಳಲು ಅವಕಾಶವಿದ್ದು, ಅದನ್ನು ಉಪಯೋಗಿಕೊಳ್ಳಬೇಕು. ವಿದೇಶಕ್ಕೆ ತೆರಳಿ ಆಯುರ್ವೇದ ಅಧ್ಯಯನ ಮತ್ತು ಪ್ರವಾಸೋದ್ಯಮ ಕುರಿತು ತಿಳಿದುಕೊಂಡು ಬನ್ನಿ ಎಂದು ತಿಳಿಸಿದರು.
  • ಜೆಎಸ್‌ಎಸ್ ವಿದ್ಯಾಸಂಸ್ಥೆಯು ಉತ್ತಮ ಮೂಲ ಸೌಲಭ್ಯದೊಡನೆ, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇಂದು ಇಷ್ಟೊಂದು ಮಂದಿ ಪದವಿ ಪಡೆಯುತ್ತಿದ್ದಾರೆ ಎಂದರೆ ನಿಮ್ಮನ್ನು ರೂಪಿಸಲು ಶಿಕ್ಷಕರು ಕಷ್ಟಪಟ್ಟಿದ್ದಾರೆ. ಶಿಕ್ಷಕರ ಶ್ರಮ ಇಲ್ಲದಿದ್ದರೆ ವಿದ್ಯಾರ್ಥಿಗಳು ಏನೂ ಸಾಧಿಸಲಾಗದು, ಆದ್ದರಿಂದ ನಾನು ಶಿಕ್ಷಕರನ್ನು ಪ್ರಶಂಸಿಸುತ್ತೇನೆ ಎಂದರು.
  • ಕಾರ್ಯಕ್ರಮದಲ್ಲಿ 100 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 6 ಜನರಿಗೆ ವಿಶೇಷ ಬಹುಮಾನ, ಇಬ್ಬರಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.
  • ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಾಂಶುಪಾಲ ಡಾ. ಸರ್ಬೇಶ್ವರ್‌ಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net