ಚಾಮರಾಜನಗರ: ಆರೋಗ್ಯವಂತ ಮಗುವಿನ ಜನನದಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಈಶ್ವರ್ ತಿಳಿಸಿದರು.
ತಾಲೂಕಿನ ಬದನಗುಪ್ಪೆ ಗ್ರಾಮದ ಗಣೇಶ ದೇಗುಲದ ಮುಂಭಾಗ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಬದನಗುಪ್ಪೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಲನೆ ಪೋಷಣೆ ಎಂದರೇನೆಂದು ತಾಯಂದಿರಿಗೆ ಗೊತ್ತಿರುತ್ತದೆ. ಪೋಷಣ್ ಅಭಿಯಾನದ ಉದ್ದೇಶವೇನೆಂದರೆ 0-6 ವರ್ಷದ ಮಕ್ಕಳ ಆರೋಗ್ಯವನ್ನು ಕಾಪಾಡುವುದಾಗಿದೆ. ರಕ್ತಹೀನತೆಯಿಂದ ಬಳುತ್ತಿರುವ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯ ಕಾಪಾಡಲು ಪೌಷ್ಠಿಕ ಆಹಾರ ಒದಗಿಸುವುದು ಪೋಷಣ್ ಅಭಿಯಾನದ ಮುಖ್ಯ ಉದ್ದೇಶ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ನೀಡುವ ಆಹಾರವನ್ನು ದೇವರ ಕೆಲಸವೆಂದೇ ಭಾವಿಸಿಸಬೇಕು. ಗರ್ಭಿಣಿಯರಿಗೆ, ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರವನ್ನು ಲಾನುಭವಿಗಳಿಗೆ ನೀಡುವುದು ಧರ್ಮದ ಕೆಲಸ. ತಾಯಿಯೇಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ ಮಗುವೂ ಸಹ ಅನಾರೋಗ್ಯಕ್ಕೊಳಗಾಗುತ್ತದೆ. ಆರೋಗ್ಯವಂತ ಮಕ್ಕಳ ಹುಟ್ಟು ಆರೋಗ್ಯವಂತ ಸಮಾಜದ ಸೃಷ್ಟಿಗೆ ನೆರವಾಗುತ್ತದೆ. ತರಕಾರಿ, ಸೊಪ್ಪು, ಮೊಟ್ಟೆ, ಮೊಳಕೆ ಕಟ್ಟಿದ ಕಾಳುಗಳ ಸೇವನೆಯಿಂದ ಪೌಷ್ಠಿಕತೆ ಸಿಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಲಾನುಭವಿಗಳು ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.
ಪ್ರಾಚೀನ ಕಾಲದಲ್ಲಿ ಸತಿ ಸಹಗಮ ಪದ್ಧತಿ ಇತ್ತು. ಆದರೆ ಈಗ ಬಾಲ್ಯ ವಿವಾಹ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಬೇಕಿದ್ದು, ಬಾಲ್ಯ ವಿವಾಹ ಮಾಡಿದರೆ ತಂದೆ-ತಾಯಿ ಜೈಲು ಶಿಕ್ಷೆ ಅನುಭವಿಸುತ್ತಾರೆ. ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಮನೋಭಾವವನ್ನು ಬಿಡಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಬಲಾಢ್ಯರಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಆಡಳಿತ ವ್ಯವಸ್ಥೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಂತೆಯೇ ನಿಮ್ಮ ಮನೆಯ ಹೆಣ್ಣು ಮಕ್ಕಳು ಅಧಿಕಾರಿಗಳಾಗಬೇಕಾದರೆ ಶಿಕ್ಷಣ ಕೊಡಿಸಬೇಕು. ವಿದ್ಯೆ ಇಲ್ಲದಿದ್ದರೆ ಅರಿವಿಲ್ಲ. ಹಣ, ಆಸ್ತಿ ಸಂಪಾದನೆ ಮಾಡುವ ಬದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಶಾಲೆ ಬಿಡಿಸಬಾರದು ಎಂದು ತಿಳಿಸಿದರು.
ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಮಕ್ಕಳಿಗೆ ಅನ್ನಪ್ರಾಶನ ಮಾಡಲಾಯಿತು. ಅಕ್ಷರಾಭ್ಯಾಸವನ್ನೂ ಸಹ ನಡೆಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶೀಲಾ, ಮೇಲ್ವಿಚಾರಕಿ ಕಲಾವತಿ, ಜಿಲ್ಲಾ ಮಾತೃವಂದನಾ ಸಂಯೋಜಕ ಶಿವಸ್ವಾಮಿ, ಪೋಷಣ್ ಅಭಿಯಾನದ ಸಹಾಯಕ ಸಂಯೋಜಕಿ ಚಾಂದಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ರಾಜಮ್ಮ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಬಸವಣ್ಣ, ಮಾಜಿ ಅಧ್ಯಕ್ಷ ಎಂ.ಕುಮಾರ್, ಗ್ರಾಪಂ ಸದಸ್ಯರು, ಕಲರ್ ಸ್ಟೋನ್ ಮುಖ್ಯಸ್ಥೆ ಸರಸ್ವತಿ, ಪಾರ್ವತಮ್ಮ, ಜಯಮಾಲ, ಜಯಲಕ್ಷ್ಮಿ, ಸುನೀತಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಗ್ರಾಮಸ್ಥರು ಇದ್ದರು.