ಬದನವಾಳಿಗೆ ರಾಹುಲ್ ಭೇಟಿ

02NGD5
Published on

ನಂಜನಗೂಡು: ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಾಲೂಕಿನ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ 2 ಬಾರಿ ಭೇಟಿ ನೀಡಿದ್ದ ನೆಲದಲ್ಲಿ ರಾಹುಲ್ ನಡೆದಾಡಿದರು. ಇನ್ನು ರಾಹುಲ್ ಗಾಂಧಿಯನ್ನು ನೋಡಲು ಸ್ಥಳೀಯರು ಮುಗಿಬಿದ್ದರು.
ಮುಂಜಾನೆ 7 ಗಂಟೆ ಸುಮಾರಿನಲ್ಲಿ ಬದನವಾಳು ಗ್ರಾಮಕ್ಕೆ ಭೇಟಿ ಕೊಟ್ಟ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ನಾಯಕರು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು. ಖಾದಿ ಕೇಂದ್ರದಲ್ಲಿರುವ ಗಾಂಧೀಜಿ ಪ್ರತಿಮೆಗೆ ಹೊಂದಿಕೊಂಡಂತೆ ಬೃಹತ್ ವೇದಿಕೆ ಹಾಕಲಾಗಿತ್ತು. ಗಾಂಧಿ ಪ್ರತಿಮೆಗೆ ರಾಹುಲ್ ಖಾದಿ ಮಾಲಾರ್ಪಣೆ ಹಾಗೂ ಪುಷ್ಪಾರ್ಚಣೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಸಂಗೀತಾ ಕಟ್ಟಿ ಗಾಯನ:
ಗಾಯಕಿ ಸಂಗೀತ ಕಟ್ಟಿ ನೇತೃತ್ವದ ತಂಡ ದೇವರ ನಾಮ, ದೇಶಭಕ್ತಿ ಸಾರುವ ಭಜನೆ ನಡೆಸಿಕೊಟ್ಟರು. ಇವರ ಶುಶ್ರಾವ್ಯ ಗಾಯನವನ್ನು ಆಲಿಸಿದ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ತಲೆದೂಗಿಸಿದರು. ಒಂದು ಹಂತದಲ್ಲಿ ರಾಹುಲ್ ಗಾಂಧಿ ತೂಕಡಿಸಿದರು ! ಬಳಿಕ ಖಾದಿ ಕೇಂದ್ರದಲ್ಲಿ ಕೈಮಗ್ಗದಲ್ಲಿ ಬಟ್ಟೆ ತಯಾರಿಸುವ ಕಾರ್ಯವಿಧಾನವನ್ನು ರಾಹುಲ್ ವೀಕ್ಷಿಸಿದರು. ಬದನವಾಳು ನೂಲುವ ಕೇಂದ್ರ ಉದ್ಘಾಟಿಸಲು 1927ರಲ್ಲಿ ಗಾಂಧೀಜಿ ಬಂದಿದ್ದ ಭಾವಚಿತ್ರವನ್ನು ಕುತೂಹಲದಿಂದ ವೀಕ್ಷಿಸಿದರು. ನಂತರ ಖಾದಿ ಕೇಂದ್ರದಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಸಂವಾದ ನಡೆಸಿದ ರಾಹುಲ್, ನೇಕಾರರ ಸಂಕಷ್ಟು ಖುದ್ದು ಆಲಿಸಿ ಮರುಕ ವ್ಯಕ್ತಪಡಿಸಿದರು.ಬಟ್ಟೆ ನೇಯುವ ಮಹಿಳೆಯರು ತಿಂಗಳಿಗೆ ಹೆಚ್ಚೆಂದರೆ 2,500 ರೂ. ಸಂಪಾದನೆ ಮಾಡುತ್ತಿರುವುದಾಗಿ ಹೇಳುತ್ತಿದ್ದಂತೆ ರಾಹುಲ್ ಒಂದು ಕ್ಷಣ ಗಾಬರಿಗೊಳಗಾದರು.
ಗಾಂಧೀ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಬದನವಾಳು ಗ್ರಾಮದ ಒಳಗೆ ರಾಹುಲ್ ಗಾಂಧಿ ಹೆಜ್ಜೆ ಹಾಕುವ ಮೂಲಕ ಗ್ರಾಮ ಸಂಚಾರ ಮಾಡಿದರು. ಎರಡು ಬೀದಿಗಳ ನಡುವೆ ಸಂಪರ್ಕ ಒದಗಿಸುವ 150 ಮೀಟರ್ ಉದ್ದದ ಓಣಿಗೆ ರಸ್ತೆ ರೂಪ ಕೊಟ್ಟ ಕಾರ್ಯಕರ್ತರು ಟೈಲ್ಸ್‌ಗಳನ್ನು ಜೋಡಿಸುವ ಮೂಲಕ ರಸ್ತೆ ಮಾಡಿ ಅದಕ್ಕೆ ಬಣ್ಣ ಬಳೆದು ಕಂಗೊಳಿಸುವಂತೆ ಮಾಡಿದರು. ರಾಹುಲ್‌ಗಾಂಧಿ ಟೈಲ್ಸ್ ಜೋಡಿಸುವ ಮೂಲಕ ಅದಕ್ಕೆ ಭಾರತ್ ಜೋಡೋ ರಸ್ತೆ ಎಂದು ನಾಮಕರಣ ಮಾಡಿದರು.ನಂತರ ಪರಿಶಿಷ್ಟ ಜಾತಿ ಬಡಾವಣೆಯ ಗಾಂಧೀಜಿ ಭೇಟಿ ಕೊಟ್ಟ ಸಂದರ್ಭದಲ್ಲಿ ಭಾಷಣ ಮಾಡಿದ್ದ ಸ್ಥಳದಲ್ಲಿ ಗಾಂಧಿ ಪ್ರತಿಮೆಯಿದ್ದು ಅಲ್ಲಿಗೆ ಕಾಲ್ನಡಿಗೆಯಲ್ಲೇ ಸಾಗಿ ಮಾಲಾರ್ಪಣೆ ಮಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ನಲ್ಲಿ ಬಣ್ಣ ಹೊಡೆದು ಕೈಬೆರಳಚ್ಚಿನ ಬಣ್ಣ ಲೇಪನ ಮಾಡಿದ ರಾಹುಲ್ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ರಾಹುಲ್ ನಡೆದುಬರುವ ಮಾರ್ಗದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗ್ರಾಮಸ್ಥರು ಸ್ವಾಗತ ಕೋರಿದರು.
ಇದಕ್ಕೂ ಮುನ್ನ ಖಾದಿ ಕೇಂದ್ರದ ಆವರಣದಲ್ಲಿ ವಿವಿಧ ಜಾತಿಯ 200 ಗಿಡಗಳನ್ನು ನೆಡುವ ಅಭಿಯಾನಕ್ಕೆ ರಾಹುಲ್ ಗಾಂಧಿ ತೆಂಗಿನ ಗಿಡಕ್ಕೆ ನೀರೆಯುವ ಮೂಲಕ ಚಾಲನೆ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net