ಬಣವೆಗೆ ಬೆಂಕಿ, ಹಸು ಸಜೀವ ದಹನ

Published on

ಪಾವಗಡ: -ತಾಲೂಕಿನ ವೈ.ಎನ್​ ಹೊಸಕೋಟೆ ಹೋಬಳಿ ವ್ಯಾಪ್ತಿಯ, ಕಾರನಾಗನಹಟ್ಟಿ ಗ್ರಾಮದ ಬಡನಾಗಪ್ಪ ಎಂಬುವವರ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಹಸು ಸ್ಥಳದಲ್ಲೇ ಸಜೀವ ದಹನವಾಗಿದೆ. ಸಮೀಪದ ಬೆಟ್ಟಕ್ಕೆ ಹತ್ತಿಕೊಂಡಿದ್ದ ಬೆಂಕಿ ಏಕಾಏಕಿ ಹುಲ್ಲಿನ ಬಣವೆಗೆ ಆವರಿಸಿದೆ. ಈ ಬಣವೆ ಸಮೀಪದಲ್ಲಿ ಕಟ್ಟಿ ಹಾಕಿದ್ದ ಐದು ಹಸುಗಳ ಪೈಕಿ ಬೆಂಕಿಯ ತೀವ್ರತೆಗೆ ಒಂದು ಹಸು ಸ್ಥಳದಲ್ಲೇ ಸಜೀವ ದಹನವಾಗಿದೆ. 4 ಹಸುಗಳು ಅರ್ಧ ಸುಟ್ಟು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಹಸುಗಳನ್ನು ರಕ್ಷಿಸಲು ಮುಂದಾಗಿದ್ದ ರೈತ ಬಡನಾಗಪ್ಪ ಅವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ರಾಸುಗಳ ಮೇವಿಗಾಗಿ ಸಂಗ್ರಹಿಸಿದ್ದ ಎರಡು ಬಣವೆಗಳು ಸುಟ್ಟಿವೆ, ಇದರ ಪಕ್ಕದ ತೋಟದ ಮನೆಯಲ್ಲಿ ಶೇಖರಿಸಿದ್ದ ಶೇಂಗಾ, ಭತ್ತ ಹಾಗೂ ಇತರ ದವಸ ಧಾನ್ಯಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ

ಸಹಾಯಕ ನಿರ್ದೇಶಕ ಹೊರಕೆರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್​ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net