

ಕಲಬುರಗಿ: ಬಡ್ಡಿ ರಹಿತ ಸಾಫ್ಟ್ ಲೋನ್ ಮಂಜೂರು ಮಾಡುವಂತೆ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ್, ಲಾಕ್ಡೌನ್ ಅವಧಿ ಝೀರೊ ಅವಧಿಯಾಗಿ ಪರಿಗಣಿಸಬೇಕು. ವ್ಯಾಪಾರಕ್ಕಾಗಿ ಪಡೆದ ಸಾಲದ ಬಡ್ಡಿ ಮನ್ನಾ ಮಾಡುವ ಮೂಲಕ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 400 ದಾಲ್ಮಿಲ್ಗಳಿದ್ದು, ಈ ಪೈಕಿ ಕೇವಲ 280 ಕಾರ್ಯನಿರ್ವಹಿಸುತ್ತಿವೆ. ಈ ಉದ್ಯಮ ಶೇ.90ರಷ್ಟು ವಲಸೆ ಕಾರ್ಮಿಕರನ್ನು ಅವಲಂಬಿಸಿದೆ. ಬಹುತೇಕ ಕಾರ್ಮಿಕರು ಬಿಹಾರಿಗಳಾಗಿದ್ದು, ಲಾಕ್ಡೌನ್ಗೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗೆ ಮುಂದುವರಿದರೆ ಈ ಎಲ್ಲ ಕಾರ್ಮಿಕರು ತಮ್ಮ ಊರಿಗೆ ತೆರಳುತ್ತಾರೆ. ಹೀಗಾಗಿ ಕಾರ್ಮಿಕರು ದೊರೆಯುವುದೇ ಕಷ್ಟವಾಗಲಿದೆ ಎಂದು ವಿವರಿಸಿದ್ದಾರೆ.
ಕೃಷಿ ಆಧಾರಿತ ಉದ್ಯಮ ಸಂಕಷ್ಟದಲ್ಲಿದೆ. ವಿಶೇವಾಗಿ ಗೊಬ್ಬರ ಮತ್ತು ರಸಗೊಬ್ಬರ ಮಾರಾಟಗಾರರಿಗೆ ಪೊಲೀಸರಿಂದ ಕಿರುಕುಳ ಹೆಚ್ಚಾಗುತ್ತಿದೆ. ಜೂನ್ನಲ್ಲಿ ಬಿತ್ತನೆ ಶುರುವಾಗುವುದರಿಂದ ರೈತರು ಈಗಿನಿಂದ ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ಪರಿಕರ, ಬೀಜ, ಗೊಬ್ಬರ ಖರೀದಿಸಬೇಕಾಗುತ್ತದೆ. ಕೃಷಿ ಚಟುವಟಿಕೆ, ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಒಂದು ಕಡೆ ಹೇಳಿದರೆ, ಹಳ್ಳಿಯಿಂದ ಬರುವ ರೈತರಿಗೆ ತೊಂದರೆ ನೀಡಲಾಗುತ್ತದೆ. ಔಷಧಿ ವ್ಯಾಪಾರಸ್ಥರಿಗೆ ಪೊಲೀಸರ ಕಿರುಕುಳ ತಪ್ಪಿಲ್ಲ ಎಂದು ಹೇಳಿದ್ದಾರೆ.
ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು ಸರಿಯಲ್ಲ. ಮೂರು ತಿಂಗಳಿಂದ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಮಧ್ಯೆ ಕೋಆರ್ಡಿನೇಷನ್ ಅಗತ್ಯ. ಈ ತೊಂದರೆಯಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವ್ಯಾಪಾರ, ವಹಿವಾಟು ಶುರು ಮಾಡಲು ಕ್ರಮ ಕೈಗೊಳ್ಳಬೇಕು. ವ್ಯಾಪಾರಸ್ಥರಿಗಾಗಿ ಒಂದು ಸಹಾಯವಾಣಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಸ್ಥೆ ಕಾರ್ಯದರ್ಶಿ ಶಶಿಕಾಂತ ಪಾಟೀಲ್ ಇತರರು ಪಾಲ್ಗೊಂಡಿದ್ದರು. ಸಂಸದ ಡಾ.ಉಮೇಶ ಜಾಧವ್ ಅವರಿಗೂ ಮನವಿ ಸಲ್ಲಿಸಿದರು.